
Terror Wall Writing | ಉಗ್ರ ಬರಹ: ಆರೋಪಿಗಳ ಪರ ವಕಾಲತ್ತು ಬೇಡ- ಸೋಮವಾರ ಮಂಗಳೂರು ವಕೀಲರ ಸಂಘದ ಮಹತ್ವದ ಸಭೆ
12/05/2020 10:28:00 AM
ಮಂಗಳೂರು: ಕರಾವಳಿಯಲ್ಲಿ ರಾಷ್ಟ್ರವಿರೋಧಿ ಗೋಡೆ ಬರಹ ಬರೆದ ಪುಂಡರ ಬಗ್ಗೆ ನ್ಯಾಯಾಲಯದಲ್ಲಿ ವಕಾಲತ್ತು ಮಾಡಬೇಕೆ.. ಬೇಡವೇ ಎಂಬ ಬಗ್ಗೆ ಚರ್ಚೆ ನಡೆಸಲು ಸೋಮವಾರ ಮಂಗಳೂರು ವಕೀಲರ ಸಂಘ ಮಹತ್ವದ ಸಭೆ ನಡೆಯಲಿದೆ.
ಗೋಡೆ ಬರಹ ಬರೆದಿರುವುದು ದೇಶವಿರೋಧಿ ಕೃತ್ಯ. ಇಂತಹ ಕೃತ್ಯ ಎಸಗಿದವರ ಪರ ವಕಾಲತ್ತು ಮಾಡುವುದು ಬೇಡ. ಆರೋಪಿಗಳಿಗೆ ಮಂಗಳೂರು ವಕೀಲರು ವಾದ ಮಾಡುವುದು ಬೇಡ. ಈ ಬಗ್ಗೆ ವಕೀಲರ ಸಂಘದಿಂದ ನಿರ್ಣಯ ಕೈಗೊಳ್ಳಿ ಎಂದು ವಿವಿಧ ಹಿಂದೂಪರ ಸಂಘಟನೆಗಳು ಮನವಿ ಮಾಡಿವೆ.
ಹಿಂದೂ ಮಹಾ ಸಭಾ, ಶ್ರೀರಾಮ ಸೇನೆ, ಬಿಜೆಪಿ ಮಂಗಳೂರು ಯುವ ಮೋರ್ಚಾ ಪ್ರತ್ಯೇಕವಾಗಿ ಮಂಗಳೂರು ವಕೀಲರ ಸಂಘದ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಿವೆ.
ಗೋಡೆ ಬರಹದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಂಗಳೂರು ವಕೀಲರ ಸಂಘ ಈ ವಿಚಾರದ ಬಗ್ಗೆ ಕಳೆದ ಶುಕ್ರವಾರವೇ ಸಭೆ ಕರೆದಿತ್ತು. ಆದರೆ, ಸೂಕ್ತ ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ಸಭೆ ನಡೆಯಲಿಲ್ಲ. ಹಾಗಾಗಿ ಈ ಕುರಿತ ನಿರ್ಧಾರ ಸೋಮವಾರಕ್ಕೆ ಮುಂದೂಡಿಕೆಯಾಗಿದೆ.