ಮೆಹಫಿಲ್-ಎ-ಕವ್ವಾಲಿ’ ವಿಚಾರ ಮಂಥನ



ಮೂಡುಬಿದಿರೆ: ಕವ್ವಾಲಿ ಕೇವಲ ಸಂಗೀತವಲ್ಲ; ಅದು ಆಧ್ಯಾತ್ಮಿಕ ಅನುಭವ. ಮನಸ್ಸಿಗೆ ಶಾಂತಿ, ಸಮಾಜಕ್ಕೆ ಏಕತೆ ಮತ್ತು ಸಂಸ್ಕೃತಿಗೆ ಶ್ರೀಮಂತಿಕೆ ನೀಡುವ ಪರಂಪರೆ ಎಂದು ಆಳ್ವಾಸ್ ಮಹಿಳಾ ಘಟಕ ‘ಸಕ್ಷಮ’ದ ಸಂಚಾಲಕಿ ಹಾಗೂ ಆಳ್ವಾ ಫಾರ್ಮಸಿಯ ನಿರ್ದೇಶಕಿ ಡಾ. ಗ್ರೀಷ್ಮ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮ’ದ ವತಿಯಿಂದ ಆಯೋಜಿಸಲಾದ ‘ಮೆಹಫಿಲ್-ಎ-ಕವ್ವಾಲಿ’ ವಿಚಾರ ಮಂಥನ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಯಾವುದೇ ಕಲೆಯು ಕಾಲಚಕ್ರದ ಪ್ರಭಾವಕ್ಕೆ ಒಳಗಾಗಿ ಬದಲಾವಣೆಗಳನ್ನು ಅನುಭವಿಸುವುದು ಸಹಜ; ಕವ್ವಾಲಿಯಲ್ಲಿಯೂ ಇಂತಹ ಪರಿವರ್ತನೆಗಳು ಸಂಭವಿಸಿವೆ.  ಕವ್ವಾಲಿಗೆ ಮನಸ್ಸನ್ನು ಧ್ಯಾನಸ್ಥ ಸ್ಥಿತಿಗೆ ಕೊಂಡೊಯ್ಯುವ ಅಪೂರ್ವ ಶಕ್ತಿ ಇದೆ. ನಾವು ಕಲಾವಿದರು, ಕಲಾಪೋಷಕರು ಅಥವಾ ಕಲಾಸಕ್ತರು ಇವುಗಳಲ್ಲಿ ಯಾವುದಾದರೂ ಒಂದು ವರ್ಗಕ್ಕೆ ಸೇರಿದವರಾಗಬೇಕು ಎಂದು ತಿಳಿಸಿದರು. ಕವ್ವಾಲಿಯು ಮನಸ್ಸನ್ನು ಶಾಂತಗೊಳಿಸಿ ಭಾವನಾತ್ಮಕ ಶುದ್ಧೀಕರಣಕ್ಕೆ ಕಾರಣವಾಗುತ್ತದೆ. ಜೊತೆಗೆ ಪ್ರೀತಿ, ಸಹಾನುಭೂತಿ ಮತ್ತು ಸಹೋದರತ್ವದ ಸಂದೇಶವನ್ನು ಸಮಾಜಕ್ಕೆ ಸಾರುವ ಸಾಮರ್ಥ್ಯ ಕವ್ವಾಲಿಗಿದೆ ಎಂದು ಅವರು ವಿವರಿಸಿದರು.

ಕಾರ್ಯಕ್ರಮದಲ್ಲಿ ಕವ್ವಾಲಿಗಳಲ್ಲಿ ಪ್ರೇಮ ಮತ್ತು ಭಕ್ತಿಯ ಅಭಿವ್ಯಕ್ತಿ, ಆತ್ಮಸಾಕ್ಷಾತ್ಕಾರದ ಚಿಂತನೆ, ಗುರು-ಶಿಷ್ಯ ಸಂಬAಧ, ಕಾಲಾನುಕ್ರಮದ ಬದಲಾವಣೆಗಳು ಹಾಗೂ ಜನಪ್ರಿಯತೆಯ ಕಾರಣಗಳ ಕುರಿತು ವಿಶ್ಲೇಷಣಾತ್ಮಕ ಚರ್ಚೆ ನಡೆಯಿತು.

ಜಿಲ್ಲಾ ಮಟ್ಟದ ಕವ್ವಾಲಿ ಸ್ಪರ್ಧೆಯಲ್ಲಿ ವಿಜೇತರಾದ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ವಿಭಾ ನಾಯಕ್, ಮನುಜ ನೇಹಿಗ, ಮಹಮ್ಮದ್ ಅರ್ಹಾನ್, ವಿಶ್ವನಾಥ್, ನಿಯೋಲ ಲೋಬೋ, ಅದಿತಿ ಪೂಜಾರಿ ಹಾಗೂ ಯದುನಂದನ್ ಅವರು “ಮೇರೆ ಮುರ್ಷಿದ್ ಖೇಲೆ ಹೋಳಿ”, “ದಮ್ ದಮ್ ಮಸ್ತ್ ಕಲಂದರ್”, “ಚಾಪ್ ತಿಲಕ್”, “ಭರ್ ದೋ ಜೋಲಿ”, “ಸನ್ಸೋನ್ ಕಿ ಮಾಲಾ ಪೆ” ಮೊದಲಾದ ಕವ್ವಾಲಿಗಳನ್ನು ಗಾಯನ ಮಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು.

ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ರಿಜಿಸ್ಟ್ರಾರ್ (ಶೈಕ್ಷಣಿಕ) ಡಾ. ನಾರಾಯಣ ಶೆಟ್ಟಿ, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ವೆಲ್‌ನೆಸ್ ಸೆಂಟರ್‌ನ ನಿರ್ದೇಶಕಿ ಡಾ. ದೀಪಾ ಕೊಟ್ಟಾರಿ ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಡಾ. ರೂಪಾ ಎಸ್. ಭಟ್ ಹಾಗೂ ಶ್ರೀಮತಿ ಮಾಧವಿ ಚಡಗ ಸಂಯೋಜಿಸಿದ್ದರು.



BREAKING NEWS
Loading latest news...
Join our WhatsApp Channel Powered By : Online Pudu