ಪತ್ನಿಯನ್ನೇ ಸಹೋದರಿ ಎಂದು ಪರಿಚಯಿಸಿ ಮತ್ತೊಬ್ಬಳಿಗೆ ಮದುವೆ ಆಮಿಷ: ಕೋಟಿಗಟ್ಟಲೆ ಹಣ ಪೀಕಿಸಿ ವಂಚನೆ



ಬೆಂಗಳೂರು: ಮ್ಯಾಟ್ರಿಮೋನಿಯಲ್ಲಿ ಪರಿಚಿತನಾದ ಯುವಕನೋರ್ವನು ಯುವತಿ ಹಾಗೂ ಆಕೆಯ ಸಂಬಂಧಿಕರು, ಸ್ನೇಹಿತರಿಂದ ಸುಮಾರು 1.75 ಕೋಟಿ ಹಣ ಪಡೆದು ವಂಚಿಸಿರುವ ಆರೋಪ ಕೇಳಿಬಂದಿದೆ. 

ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದ ಯುವತಿಗೆ 2024 ಮಾರ್ಚ್​​ನಲ್ಲಿ ಆರೋಪಿ ಪರಿಚಿತನಾಗಿದ್ದಾನೆ. ತಾನು ದೊಡ್ಡ ಉದ್ಯಮಿ, 715 ಕೋಟಿ ರೂ. ಆಸ್ತಿ ಇದೆ ಎಂದು ಹೇಳಿಕೊಂಡಿದ್ದ ಈತ ತಂದೆಯನ್ನು ನಿವೃತ್ತ ತಹಶೀಲ್ದಾರ್ ಎಂದು ಪರಿಚಯಿಸಿದ್ದಾನೆ. ಬಳಿಕ ಯುವತಿಗೆ "ನಿನ್ನನ್ನೇ ಮದುವೆಯಾಗುತ್ತೇನೆ" ಎಂದು ಯುವತಿಗೆ ಅಮಿಷವೊಡ್ಡಿದ್ದಲ್ಲದೆ, ಕೆಂಗೇರಿ ಬಳಿ ಕರೆಸಿಕೊಂಡು ಮನೆಯವರಿಗೆ ಪರಿಚಯಿಸಿದ್ದ ಎನ್ನಲಾಗಿದೆ.

ಬಳಿಕ ತನ್ನ ಆಟ ಶುರುಮಾಡಿದ್ದ ಯುವಕ, ಆಸ್ತಿ ಸಂಬಂಧ ತನ್ನ ಮೇಲೆ ಇಡಿಯಲ್ಲಿ ಕೇಸ್ ದಾಖಲಾಗಿದೆ. ತನ್ನ ಬ್ಯಾಂಕ್ ಖಾತೆ ಪ್ರಾಬ್ಲಂ ಆಗಿದೆ ಎಂದಿದ್ದ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳು ಮತ್ತು ಕೋರ್ಟ್ ಪ್ರತಿಗಳನ್ನು ತೋರಿಸಿದ್ದಾನೆ. ಹಣದ ಅವಶ್ಯಕತೆ ಇದೆ ಎಂದು ಮೊದಲು 15 ಸಾವಿರ ಹಣ ಪಡೆದು, ನಂತರ ಒಟ್ಟಿಗೆ ಬ್ಯುಸಿನೆಸ್ ಮಾಡೋಣವೆಂದು ಯುವತಿ ಹೆಸರಲ್ಲಿ ಲೋನ್ ಮಾಡಿಸಿದ್ದಾನೆ. ಜೊತೆಗೆ ಯುವತಿಯ ಸ್ನೇಹಿತರ ಬಳಿಯೂ ಸಾಲ ಪಡೆದಿದ್ದ. ಹಂತ ಹಂತವಾಗಿ ಒಟ್ಟು 1.75 ಕೋಟಿ ಹಣ ಪಡೆದಿದ್ದ ಎಂದು ದೂರಲಾಗಿದೆ.

ಈ ನಡುವೆ ಒಮ್ಮೆ 22 ಲಕ್ಷ ಹಣ ವಾಪಸ್ ಕೊಟ್ಟಿದ್ದಾನೆ. ಆದರೆ ಉಳಿದ ಹಣ ನೀಡಲು ಹಿಂದೇಟು ಹಾಕಿದ್ದಾನೆ. ಈ ಬಗ್ಗೆ ಕೇಳಿದ್ದಕ್ಕೆ ಯುವತಿ ಹಾಗೂ ಆಕೆಯ ಸ್ನೇಹಿತರಿಗೆ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈತನ ಹಿನ್ನೆಲೆ ಕೆದಕಿದಾಗ ಸ್ಫೋಟಕ ಮಾಹಿತಿ ಬಯಲಾಗಿದೆ. ಆತನಿಗೆ ಅದಾಗಲೇ ಮದುವೆಯಾಗಿ ಮಗು ಇದ್ದರೂ ಮತ್ತೊಬ್ಬ ಯುವತಿಗೆ ಮದುವೆ ಆಮಿಷ ಒಡ್ಡಿದ್ದಲ್ಲದೆ, ಹಣ ಪೀಕಿರೋದು ಬಟಾಬಯಲಾಗಿದೆ. 

ಅಲ್ಲದೆ ಮನೆಯವರ ಪರಿಚಯದ ವೇಳೆ ತಾನು ತಾಳಿ ಕಟ್ಟಿರುವ ಹೆಂಡತಿಯನ್ನೇ ಅಕ್ಕ ಎಂದು ಪರಿಚಯಿಸಿದ್ದ ಎಂಬ ವಿಚಾರವೂ ಗೊತ್ತಾಗಿದೆ. ಮೋಸ ಹೋದ ವಿಚಾರ ತಿಳಿಯುತ್ತಿದ್ದಂತೆ ಯುವತಿ ವೈಟ್​​ಫೀಲ್ಡ್​​ ಠಾಣೆಗೆ ದೂರು ನೀಡಿದ್ದು, ವಿಜಯ್ ರಾಜ್ ಗೌಡ, ಬೊರೇಗೌಡ, ಸೌಮ್ಯ ಎಂಬವರ ವಿರುದ್ಧ ಕೇಸ್​​ ದಾಖಲಾಗಿದೆ. ಬಳಿಕ ಪ್ರಕರಣವನ್ನು ಪೊಲೀಸರು ಕೆಂಗೇರಿ ಠಾಣೆಗೆ ವರ್ಗಾಯಿಸಿದ್ದು, ತನಿಖೆ ಮುಂದುವರಿದಿದೆ.