ದಿಢೀರನೇ ಇಂಡಿಗೋ ಏರ್‌ಲೈನ್ಸ್ ವಿಮಾನ ಹಾರಾಟ ರದ್ದು- ಆನ್‌ಲೈನ್‌ನಲ್ಲೇ ನಡೆದ ವಧೂ‌-ವರರ ಆರತಕ್ಷತೆ


ಹುಬ್ಬಳ್ಳಿ: ದಿಢೀರನೇ ಇಂಡಿಗೋ ಏರ್‌ಲೈನ್ಸ್ ವಿಮಾನ ಹಾರಾಟ ರದ್ದುಗೊಳಿಸಿದ್ದರಿಂದ ಹುಬ್ಬಳ್ಳಿಯಲ್ಲಿ ನಡೆಯಬೇಕಿದ್ದ ಆರತಕ್ಷತೆಗೆ ವಧೂ - ವರರೇ ಬರಲಾಗದೆ ಆನ್‌ಲೈನ್ ಮೂಲಕವೇ ಆರತಕ್ಷತೆ ಮುಗಿಸಿದ ಪ್ರಸಂಗ ನಡೆದಿದೆ.

ಮಗಳು-ಅಳಿಯ ಬರಲಾಗದ್ದರಿಂದ ಅವರ ಬದಲು ವಧುವಿನ ತಂದೆ - ತಾಯಿಯೇ ಕುಳಿತು ಆರತಕ್ಷತೆ ಶಾಸ್ತ್ರ ಮುಗಿಸಿದ್ದಾರೆ. ಬೆಂಗಳೂರಿನಲ್ಲಿ ಸಾಫ್ಟ್‌ವೇ‌ರ್  ಇಂಜಿನಿಯರ್‌ಗಳು ಆಗಿರುವ ಹುಬ್ಬಳ್ಳಿಯ ಮೇಧಾ ಕ್ಷೀರಸಾಗರ ಹಾಗೂ ಒಡಿಶಾದ ಭುವನೇಶ್ವರದ ಸಂಗ್ರಾಮ್ ದಾಸ್‌ ಪರಸ್ಪರ ಪ್ರೀತಿಸುತ್ತಿದ್ದರು. ಎರಡೂ ಕುಟುಂಬದವರ ಒಪ್ಪಿಗೆಯಲ್ಲಿ ಇಬ್ಬರ ಮದುವೆಯನ್ನು ಭುವನೇಶ್ವರದಲ್ಲಿ ನ.23ರಂದು ನೆರವೇರಿಸಲಾಗಿತ್ತು.

ಮದುವೆ ಸಲುವಾಗಿ ವಧುವಿನ ತವರು ಹುಬ್ಬಳ್ಳಿಯಲ್ಲಿ ಡಿ.3ರಂದು ಆರತಕ್ಷತೆ ಆಯೋಜಿಸಿದ್ದು ಇದಕ್ಕಾಗಿ ಹುಬ್ಬಳ್ಳಿಯ ಗುಜರಾತ್ ಭವನದಲ್ಲಿ ಸಿದ್ಧತೆ ಮಾಡಲಾಗಿತ್ತು. ವಧು ಹಾಗೂ ವರನ ಸಂಬಂಧಿಕರೂ ಬಂದಿದ್ದರು. ವಧು - ವರರು ಭುವನೇಶ್ವರದಿಂದ ಬೆಂಗಳೂರಿಗೆ, ಅಲ್ಲಿಂದ ಹುಬ್ಬಳ್ಳಿಗೆ ಡಿ.2ಕ್ಕೆ ಬುಕ್ ಮಾಡಿದ್ದರು. ಸಂಬಂಧಿಕರಿಗೆ ಭುವನೇಶ್ವರದಿಂದ ಮುಂಬೈ, ಅಲ್ಲಿಂದ ಹುಬ್ಬಳ್ಳಿಗೆ ವಿಮಾನದ ಟಿಕೆಟ್ ಬುಕ್ ಆಗಿತ್ತು. ವಿಮಾನ

ಆದರೆ, ಡಿ.2ರ ಬೆಳಗ್ಗೆ 9ರಿಂದ ಮರುದಿನ (ಡಿ.3) ಬೆಳಗ್ಗೆ ವರೆಗೂ ವಿಮಾನ ವಿಳಂಬವಾಗುತ್ತಿದೆ ಎಂದು ತಿಳಿಸಿದ್ದ ಇಂಡಿಗೋ ಸಿಬ್ಬಂದಿ, ಡಿ.3ರ ಬೆಳಗ್ಗೆ ವಿಮಾನ ರದ್ದಾಗಿದೆ ಎಂದು ಪ್ರಕಟಿಸಿದ್ದರು. ಹೀಗಾಗಿ, ಬರುವುದು ಸಾಧ್ಯವಾಗದೇ ವಧು, ವರ ಮತ್ತು ವರನ ಪಾಲಕರೆಲ್ಲ ಭುವನೇಶ್ವರದಲ್ಲೇ ಬಾಕಿಯಾಗಿದ್ದರು.

ವಧುವಿನ ತಂದೆ ಅನಿಲ್ ಕಮಾರ್ ಪ್ರತಿಕ್ರಿಯಿಸಿ, ಡಿ.2ಕ್ಕೆ ವಿಮಾನದ ಟಿಕೆಟ್ ಬುಕ್ ಮಾಡಲಾಗಿತ್ತು. ಆದರೆ, 18-20 ಗಂಟೆ ಕಾಯಿಸಿ ನಂತರ ವಿಮಾನ ರದ್ದಾಗಿದ್ದನ್ನು ಪ್ರಕಟಿಸಿದರು. ನಾವು ಲಕ್ಷಾಂತರ ರೂ. ಖರ್ಚು ಮಾಡಿ ಆರತಕ್ಷತೆಗೆ ಸಿದ್ಧತೆ ಮಾಡಿದ್ದೆವು. ಏನು ಮಾಡುವುದು ಎಂದು ತೋಚದಿದ್ದಾಗ ಕೊನೆಗೆ ಆನ್‌ಲೈನ್ ಮೂಲಕವೇ ಆರತಕ್ಷತೆ ನಡೆಸಲು ತೀರ್ಮಾನಿಸಿದೆವು. ವಿಮಾನ ಸಂಸ್ಥೆಯ ವಿಳಂಬದ ಬಗ್ಗೆ ಮೊದಲೇ ತಿಳಿದಿದ್ದರೆ ಪರ್ಯಾಯ ವ್ಯವಸ್ಥೆ ಮಾಡುತ್ತಿದ್ದೆವು ಎಂದು ತಿಳಿಸಿದರು.

ಹುಬ್ಬಳ್ಳಿಯಲ್ಲಿ ವಧುವಿನ ತಂದೆ - ತಾಯಿಯೇ ವಧು - ವರರ ಕುರ್ಚಿಯಲ್ಲಿ ಕುಳಿತರೆ, ಅತ್ತ ವಧು-ವರ ಭುವನೇಶ್ವರದಲ್ಲೇ ಕುಳಿತು ಆನ್‌ಲೈನ್ ವಿಡಿಯೋ ಕಾನ್ವರೆನ್ಸ್ ಮೂಲಕ ಆರತಕ್ಷತೆ ಮುಗಿಸಿದರು. ಬಂದಿದ್ದ ಸಂಬಂಧಿಕರು ವರ್ಚುವಲ್ ಮೂಲಕ ವಧು-ವರರನ್ನು ಕಂಡು ತಂದೆ ತಾಯಿಗೆ ಗಿಫ್ಟ್ ಕೊಟ್ಟು ಊಟ ಮುಗಿಸಿದರು.