ಮಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಸಮಯಪ್ರಜ್ಞೆ:
ಡಿಜಿಟಲ್ ಅರೆಸ್ಟ್‌ನಿಂದ 84 ಲಕ್ಷ ರೂ. ವಂಚನೆಗೆ ಬ್ರೇಕ್
ಮಂಗಳೂರು: ಮಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಅವರ ಸಮಯಪ್ರಜ್ಞೆಯಿಂದ ವಂಚಕರು ಹಿರಿಯ ದಂಪತಿಗಳನ್ನು ಡಿಜಿಟಲ್ ಅರೆಸ್ಟ್ ಮಾಡಿ ಹಣ ದೋಚುವುದು ತಪ್ಪಿಸಲಾಗಿದೆ.
ಮುಲ್ಕಿಯ ದಾಮಸಕಟ್ಟೆ ನಿವಾಸಿಗಳಾದ ಬೆನ್ಡಿಕ್ ಪೆರ್ನಾಂಡಿಸ್ (84 ವರ್ಷ) ಹಾಗೂ ಲಿಲ್ಲಿ ಸಿಸಿಲಿಯ ಫೆರ್ನಾಂಡಿಸ್ (71 ವರ್ಷ) ಅವರು ಸಂತ್ರಸ್ತರಾಗಿದ್ದರು.
ಡಿಸೆಂಬರ್ 1 ರಂದು ಅಪರಿಚಿತರು ಉತ್ತರ ಪ್ರದೇಶದ ಸಿ.ಐ.ಡಿ ಪೊಲೀಸ್ ಎಂಬ ಸೊಗಿನಲ್ಲಿ ವಾಟ್ಸಪ್ ಮೂಲಕ ಸಂಪರ್ಕಿಸಿ, “ನೀವು 6 ಕೋಟಿ ಮೋಸ ಮಾಡಿದ್ದೀರಿ, ವಂಚನೆ ಪ್ರಕರಣ ದಾಖಲಾಗಿದೆ” ಎಂದು ನಂಬಿಸಿ ಡಿಜಿಟಲ್ ಅರೆಸ್ಟ್ ಮಾಡಿದ್ದರು.
ತನಿಖೆಗಾಗಿ ಖಾತೆಯಲ್ಲಿರುವ ಹಣವನ್ನು ವರ್ಗಾಯಿಸಬೇಕೆಂದು ಒತ್ತಾಯಿಸಿದ ಮೇಲೆ, ವೃದ್ಧ ದಂಪತಿಗಳು ಕಿನ್ನಿಗೋಳಿ ಕೆನರಾ ಬ್ಯಾಂಕ್‌ಗೆ ತೆರಳಿ ಸುಮಾರು 84 ಲಕ್ಷ ರೂಪಾಯಿಯನ್ನು ವಂಚಕರು ಹೇಳಿದ ಖಾತೆಗೆ ವರ್ಗಾಯಿಸಲು ಯತ್ನಿಸಿದ್ದರು.
ಆದರೆ ಕಿನ್ನಿಗೋಳಿ ಕೆನರಾ ಬ್ಯಾಂಕ್ ಮ್ಯಾನೇಜರ್ ರಾಯಸ್ಟನ್ ಅವರು ದೊಡ್ಡ ಮೊತ್ತದ ವರ್ಗಾವಣೆಗೆ ಸಂಶಯ ವ್ಯಕ್ತಪಡಿಸಿ ವಿಚಾರಿಸಿದಾಗ ಸರಿಯಾದ ಉತ್ತರ ಸಿಗದೇ ಇದ್ದದ್ದರಿಂದ ತಕ್ಷಣ ಬೀಟ್ ಪೊಲೀಸರಾದ ಯಶವಂತ ಕುಮಾರ್ ಮತ್ತು ಗುಪ್ತಚರ ಸಿಬ್ಬಂದಿ ಕಿಶೋರ್ ಅವರಿಗೆ ಮಾಹಿತಿ ನೀಡಿದರು.
ಕೂಡಲೇ ಮುಲ್ಕಿ ಪೊಲೀಸರು ವೃದ್ಧರ ಮನೆಗೆ ತೆರಳಿ ಮೊಬೈಲ್ ಪರಿಶೀಲಿಸಿ ಡಿಜಿಟಲ್ ಅರೆಸ್ಟ್ ಆಗಿರುವುದು ದೃಢಪಟ್ಟ ನಂತರ ಬ್ಯಾಂಕ್ ಮ್ಯಾನೇಜರ್‌ಗೆ ಕರೆ ಮಾಡಿ ವರ್ಗಾವಣೆ ತಡೆಹಿಡಿದರು. ಹೀಗೆ 84 ಲಕ್ಷ ರೂಪಾಯಿ ಸುರಕ್ಷಿತವಾಗಿ ಉಳಿದಿದೆ. ಮುಲ್ಕಿ ಪೊಲೀಸರು ಪ್ರಕರಣ ವಿಚಾರಣೆ ನಡೆಸುತ್ತಿದ್ದಾರೆ.
