ಪತ್ನಿಯನ್ನು ಗೆಲ್ಲಿಸಿದರೆ 5 ವರ್ಷ ಉಚಿತ ಕಟಿಂಗ್, ಶೇವಿಂಗ್ ಘೋಷಣೆ!
ಚುನಾವಣೆಗೆ ಕ್ಷೌರಿಕನ ಬಂಪರ್ ಆಫರ್
ಸಿದ್ದಿಪೇಟೆ: ತೆಲಂಗಾಣದ ಸಿದ್ದಿಪೇಟೆ ಜಿಲ್ಲೆಯ ದುಬ್ಬಾಕ್ ತಾಲೂಕಿನ ರಘೋತ್ತಂಪಲ್ಲಿ ಗ್ರಾಮದ ಯುವಕನೊಬ್ಬನ ಚುನಾವಣಾ ಭರವಸೆ ಭಾರೀ ಚರ್ಚೆಗೆ ಕಾರಣವಾಗಿದೆ.
ಈತ, ತನ್ನ ಪತ್ನಿ ವಾರ್ಡ್ ಸದಸ್ಯೆಯಾಗಿ ಆಯ್ಕೆಯಾದರೆ, ಆ ವಾರ್ಡ್‌ನ ಎಲ್ಲಾ ಮತದಾರರಿಗೆ ಐದು ವರ್ಷಗಳ ಕಾಲ ಉಚಿತವಾಗಿ ಕಟಿಂಗ್ ಮತ್ತು ಶೇವಿಂಗ್ ಮಾಡುವುದಾಗಿ ಭರವಸೆಯನ್ನು ನೀಡಿದ್ದಾರೆ.
ರಘೋತ್ತಂಪಲ್ಲಿ ಗ್ರಾಮದ ಶಿವಾನಿ ಅವರು ವಾರ್ಡ್ 6ರ ಸದಸ್ಯೆಯಾಗಿ ಸ್ಪರ್ಧಿಸುತ್ತಿದ್ದಾರೆ. ಅವರ ಪತಿ ಶ್ರೀಕಾಂತ್ ವೃತ್ತಿಯಲ್ಲಿ ಕ್ಷೌರಿಕರಾಗಿದ್ದಾರೆ.
ಈ ಕುರಿತು ಶ್ರೀಕಾಂತ್ ಅವರು ಮಾತನಾಡಿದ್ದು, “ತಮ್ಮ ವಾರ್ಡ್ ಯಾವುದೇ ಅಭಿವೃದ್ಧಿಯನ್ನು ಕಂಡಿಲ್ಲ, ತಮ್ಮ ವಾರ್ಡ್‌ಗೆ ಏನಾದರೂ ಮಾಡುವ ಉದ್ದೇಶದಿಂದ ತನ್ನ ಪತ್ನಿಯನ್ನು ವಾರ್ಡ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದ್ದೇನೆ” ಎಂದು ಹೇಳಿದ್ದಾರೆ.
ತಮ್ಮ ವಾರ್ಡ್ ತುಂಬಾ ಹಿಂದುಳಿದಿದ್ದು, ನನ್ನ ಪತ್ನಿ ಶಿವಾನಿ ಗೆದ್ದರೆ, ಖಂಡಿತವಾಗಿಯೂ ವಾರ್ಡ್ ಅನ್ನು ಅಭಿವೃದ್ಧಿಪಡಿಸುತ್ತೇನೆ. ತಮ್ಮ ವಾರ್ಡ್‌ನಲ್ಲಿರುವ ಪ್ರತಿಯೊಬ್ಬ ಮತದಾರರಿಗೂ 5 ವರ್ಷಗಳ ಕಾಲ ಉಚಿತ ಹೇರ್ ಕಟಿಂಗ್ ಮತ್ತು ಶೇವಿಂಗ್ ಮಾಡುತ್ತೇನೆ. ದಯವಿಟ್ಟು ಎಲ್ಲರೂ ತಮ್ಮ ಪತ್ನಿಗೆ ಮತ ಚಲಾಯಿಸಿ, ಅವರನ್ನು ಗೆಲ್ಲಿಸಿ ಎಂದು ಮನವಿಯನ್ನು ಮಾಡಿದ್ದಾರೆ.
ಶ್ರೀಕಾಂತ್ ತನ್ನ ವೃತ್ತಿಯನ್ನು ಚುನಾವಣಾ ಪ್ರಚಾರದೊಂದಿಗೆ ಜೋಡಿಸುವ ಮೂಲಕ ಮತದಾರರನ್ನು ಆಕರ್ಷಿಸಲು ಮಾಡುತ್ತಿರುವ ಈ ಹೊಸ ತಂತ್ರದ ಬಗ್ಗೆ ಗ್ರಾಮಸ್ಥರು ಕುತೂಹಲದಿಂದ ಚರ್ಚೆ ಮಾಡುತ್ತಿದ್ದಾರೆ. ಆ ವಾರ್ಡ್‌ನ ಮತದಾರರು ಶ್ರೀಕಾಂತ್ ಅವರ ಮಾತುಗಳನ್ನು ನಂಬಿ ಅವರ ಪತ್ನಿ ಶಿವಾನಿ ಅವರನ್ನು ಗೆಲ್ಲಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
