ಎಳನೀರು ಮಾರುತ್ತಿದ್ದ ಮಹಿಳೆಯ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬ್ಯಾಂಕ್ ಮ್ಯಾನೇಜರ್: ಹೆತ್ತತಾಯನ್ನೇ ಬಳಸಿ ಹನಿಟ್ರ್ಯಾಪ್ ಮಾಡಿದ ಪುತ್ರ ಅರೆಸ್ಟ್



ವಿಜಯಪುರ: ಹನಿಟ್ರ್ಯಾಪ್ ಪ್ರಕರಣಗಳು ಹೆಚ್ಚುತ್ತಿದೆ. ಇದೀಗ ಇಂತಹದ್ದೇ ಹನಿಟ್ರ್ಯಾಪ್ ಪ್ರಕರಣದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ ನಡೆದಿದೆ. ಹೆತ್ತತಾಯಿಯನ್ನೇ ಬಳಸಿಕೊಂಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್​ವೊಂದರ ಮ್ಯಾನೇಜರ್​ನನ್ನು ಹನಿಟ್ರ್ಯಾಪ್ ಖೆಡ್ಡಾಗೆ ಕೆಡವಿ ಲಕ್ಷ ಲಕ್ಷ ಸುಲಿಗೆ ಮಾಡಲು ಯತ್ನಿಸಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

ಇಂಡಿ ಪಟ್ಟಣದಲ್ಲಿ ಎಳನೀರು ಮಾರುತ್ತಿದ್ದ 44 ವರ್ಷದ ಮಹಿಳೆಗೆ ಸರ್ಕಾರಿ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಂದಿಗೆ ಸಲುಗೆ ಬೆಳೆದಿದೆ. ಕಳೆದ ನವೆಂಬರ್ 1 ರಂದು ಆಕೆ ಮ್ಯಾನೇಜರ್‌ನನ್ನು ಮನೆಗೆ ಕರೆಸಿಕೊಂಡಿದ್ದರು‌. ಅಲ್ಲಿ ಇಬ್ಬರೂ ದೈಹಿಕ ಸಂಪರ್ಕ ನಡೆಸಿದ್ದರು. ಇದೇ ವೇಳೆ ಮನೆಯ ಕಿಟಿಕಿಯಲ್ಲಿ ಮೊಬೈಲ್ ಇಟ್ಟಿದ್ದನ್ನು ಕಂಡ ಮ್ಯಾನೇಜರ್, ಪ್ರಶ್ನೆ ಮಾಡಿದಾಗ ಫೋನ್ ಕೆಟ್ಟಿದೆ ಎಂದು ಸಬೂಬು ಹೇಳಿದ್ದರು. ಬಳಿಕ ನವೆಂಬರ್ 5ರಂದು ಬ್ಯಾಂಕ್ ಮ್ಯಾನೇಜರ್​ಗೆ ಕರೆ ಮಾಡಿದ ಮಹಿಳೆ , ನಾವಿಬ್ಬರು ಏಕಾಂತದಲ್ಲಿರುವುದನ್ನು ಯಾರೋ ವಿಡಿಯೋ ಮಾಡಿದ್ದಾರೆ. ಅವರ ಬಳಿ ಮಾತನಾಡಿ ಬಗೆ ಹರಿಸಿಕೊಳ್ಳಿ ಎಂದು ಹೇಳಿದ್ದರು.

ಇದೇ ವೇಳೆ ಮಹಿಳೆಯ ಅಳಿಯ ಮಹೇಶ ಬಗಲಿ, ಪತ್ರಕರ್ತ ತೌಶೀಫ್ ಖುರೇಷಿ ಎನ್ನುವವರಿಗೆ ನಿಮ್ಮಿಬ್ಬರ ವಿಡಿಯೋ ಸಿಕ್ಕಿವೆ ಎಂದು ಮ್ಯಾನೇಜರ್​ಗೆ ಬೆದರಿಸಿದ್ದ. ಈ ಹೇಯ ಕೃತ್ಯದಲ್ಲಿ ಮಹಿಳೆಯ ಮಗನೂ ಸೇರಿದ್ದನೆಂಬುದು ತಿಳಿದುಬಂದಿದೆ. ತೌಶೀಫ್ ಖುರೇಷಿ, ಮಹೇಶ ಬಗಲಿ ಹಾಗೂ ಮಹಿಳೆಯ ಪುತ್ರ ಅಮೂಲ್ ಸೇರಿಕೊಂಡು ಬ್ಯಾಂಕ್ ಮ್ಯಾನೇಜರ್ ಬಳಿ ಬಂದು ಎಲ್ಲಾ ಬಗೆಹರಿಸಿಕೊಳ್ಳಿ, ಎಲ್ಲರಿಗೂ ಸೇರಿದಂತೆ 10 ಲಕ್ಷ ಹಣ ನೀಡಬೇಕು. ಇಲ್ಲವಾದರೆ ಮಾಧ್ಯಮಗಳಲ್ಲಿ ವಿಡಿಯೋ ಲೀಕ್ ಮಾಡಲಾಗುತ್ತದೆ ಎಂದು ಹೆದರಿಸಿದ್ದಾರೆ. ಇದರಿಂದ ಭಯಗೊಂಡ ಬ್ಯಾಂಕ್ ಮ್ಯಾನೇಜರ್ ಇಂಡಿ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಮಹಿಳೆ ಸೇರಿದಂತೆ ಉಳಿದ ಮೂವರ ಮೇಲೆ ದೂರು ನೀಡಿದ್ದಾರೆ.

ಈ ಪ್ರಕರಣ ಕುರಿತು ದೂರು ದಾಖಲಿಸಿಕೊಂಡ ಇಂಡಿ ಪಟ್ಟಣ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಪ್ರಕರಣ ದಾಖಲಾಗುತ್ತಿದ್ದಂತೆ ತೌಶೀಫ್, ಮಹೇಶ ಹಾಗೂ ಮಹಿಳೆ ಪರಾರಿಯಾಗಿದ್ದಾರೆ. ಇದೀಗ ಮಹಿಳೆಯ ಪುತ್ರನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಉಳಿದವರ ಹುಡುಕಾಟ ಮುಂದುವರೆದಿದೆ. ಮಹಿಳೆ ಸಹಿತ ಇಡೀ ಟೀಂ ಇಂಡಿ ಪಟ್ಟಣದಲ್ಲಿ ಹಲವಾರು ಜನರಿಗೆ ಇದೇ ರೀತಿ ಹನಿಟ್ರ್ಯಾಪ್ ಮಾಡಿ  ವಿಡಿಯೋಗಳನ್ನು ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿರುವ ಶಂಕೆ ವ್ಯಕ್ತವಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಯಾರಾದರೂ ನೊಂದವರು, ಬೆದರಿಕೆಗೆ ಒಳಗಾದವರು ಇದ್ದರೆ ದೂರು ನೀಡಿ ಎಂದು ಪೊಲೀಸರು ಹೇಳಿದ್ದಾರೆ.

BREAKING NEWS
Loading latest news...
Join our WhatsApp Channel Powered By : Online Pudu