ತುಮಕೂರು: ಕುಣಿಗಲ್ ತಾಲೂಕಿನ ಆಲ್ಕೆರೆ ಗ್ರಾಮದಲ್ಲಿ ಪತ್ನಿ ತನ್ನ ಅಳಿಯನೊಂದಿಗೆ ಪರಾರಿಯಾಗಿದ್ದರಿಂದ ಮನನೊಂದ ಪತಿ ಇಬ್ಬರು ಮಕ್ಕಳನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ನಡೆದಿದೆ.
ಶಿವಣ್ಣ ಎಂಬವರ ಪತ್ನಿ ಕಾವ್ಯಾ, ಸ್ವತಃ ಪತಿ ಶಿವಣ್ಣನ ಅಕ್ಕನ ಮಗ ಹೇಮಂತ್ ಎಂಬಾತನ ಜೊತೆಗೆ ಓಡಿಹೋಗಿದ್ದಾಳೆ.
ಸಹೋದರಿ ಮೃತಪಟ್ಟ ಬಳಿಕ ಆಕೆಯ ಪುತ್ರ ಹೇಮಂತ್ನನ್ನು ತನ್ನ ಮನೆಗೇ ಕರೆತಂದು ಶಿವಣ್ಣ ಸಾಕಿಕೊಂಡಿದ್ದ. ಆದರೆ ಈ ಹೇಮಂತ್ ಮಾವನಿಗೇ ಮೋಸ ಮಾಡಿದ್ದು, ಆತನ ಹೆಂಡತಿಯೊಂದಿಗೆ ಅಂದರೆ ಅತ್ತೆ ಕಾವ್ಯಾ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಈ ವಿಚಾರ ತಿಳಿದು ಆತನನ್ನು ಶಿವಣ್ಣ ಮನೆಯಿಂದ ಹೊರಹಾಕಿದ್ದ. ಆ ಬಳಿಕ ಒಮ್ಮೆ ವಿಷ ಸೇವಿಸಿ ಆತ್ಮಹತ್ಯೆಗೂ ಯತ್ನಿಸಿದ್ದ. ಆಗ ಗ್ರಾಮಸ್ಥರು ನ್ಯಾಯ ಪಂಚಾಯತಿಗೆ ಮಾಡಿ ಗಂಡ ಹೆಂಡತಿ ಇಬ್ಬರೂ ಅನೋನ್ಯವಾಗಿ ಇರುವಂತೆ ಬುದ್ದಿ ಹೇಳಿದ್ದರು. ಆ ಬಳಿಕ ಕೆಲ ತಿಂಗಳು ಗಂಡ ಹೆಂಡತಿ ಚೆನ್ನಾಗಿಯೇ ಇದ್ದರು.
ಆದರೆ ಕಳೆದ ಒಂದು ವಾರದ ಹಿಂದೆ ಗಂಡ ಶಿವಣ್ಣ ಮತ್ತು ಮಕ್ಕಳನ್ನು ಬಿಟ್ಟು ಹೇಮಂತ್ ಜೊತೆ ಕಾವ್ಯಾ ಓಡಿಹೋಗಿದ್ದಳು. ಈ ಬಗ್ಗೆ ಕುಣಿಗಲ್ ಪೊಲೀಸ್ ಠಾಣೆಗೆ ಶಿವಣ್ಣ ದೂರು ನೀಡಿದ್ದು, ಮತ್ತೆ ಈ ರೀತಿ ಕೆಲಸ ಮಾಡಲ್ಲ ಎಂದು ಠಾಣೆಯಲ್ಲಿಯೇ ಕ್ಷಮೆ ಕೇಳಿ ಗಂಡನ ಮನೆಗೆ ವಾಪಸ್ ಬಂದಿದ್ದಳು ಎನ್ನಲಾಗಿದೆ.
ಇನ್ನು ಗಂಡನ ಮನೆಗೆ ಬಂದ ಮರುದಿನವೇ ಶಿವಣ್ಣ ಕೆಲಸಕ್ಕೆ ಹೋದ ವೇಳೆ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನಾಭರಣ ಹಾಗೂ ಮನೆಯಲ್ಲಿಟ್ಟಿದ್ದ ಹಣವನ್ನ ತೆಗೆದುಕೊಂಡು ಓಡಿಹೋಗಿದ್ದಳು. ಇದರಿಂದ ಮನನೊಂದಿದ್ದ ಶಿವಣ್ಣ, ನಿನ್ನೆ ರಾತ್ರಿ ತನ್ನ ಮನೆಯಲ್ಲಿ ಮಕ್ಕಳನ್ನ ಉಸಿರುಗಟ್ಟಿಸಿ ಸಾಯಿಸಿ ಬಳಿಕ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಬೆಳಗ್ಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಕುಣಿಗಲ್ ಪೊಲೀಸರಿಂದ ಈ ಬಗ್ಗೆ ತನಿಖೆ ಮುಂದುವರಿದಿದೆ. ಮೃತದೇಹಗಳನ್ನು ಆದಿಚುಂಚನಗಿರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು, ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.