ಬೆಳಗಾವಿ:
ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಕೌಟುಂಬಿಕ ಕಲಹ ವಿಕೋಪಕ್ಕೆ ತಿರುಗಿ, ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಗರದ ಹನುಮಾನ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಪತಿಯನ್ನು ಎಪಿಎಂಸಿ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಅಶ್ವಿನಿ ಹೆಗಡೆ (26) ಹತ್ಯೆಯಾದ ದುರ್ದೈವಿ ಮಹಿಳೆ. ಈಕೆಯ ಪತಿ ವಿಠ್ಠಲ್ ಹೆಗಡೆ ಕೊಲೆಗೈದ ಆರೋಪಿ.
ಹನುಮಾನ ನಗರದಲ್ಲಿ ನಡೆದಿದ್ದೇನು?:
ಮೂಲತಃ ಬೈಲಹೊಂಗಲ ತಾಲೂಕಿನವರಾದ ವಿಠ್ಠಲ್, ಜೀವನೋಪಾಯಕ್ಕಾಗಿ ಬೆಳಗಾವಿಗೆ ಬಂದು ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದನು. ಪತ್ನಿ ಅಶ್ವಿನಿ, ಇಬ್ಬರು ಪುಟ್ಟ ಮಕ್ಕಳು ಹಾಗೂ ತನ್ನ ವೃದ್ಧ ತಂದೆ-ತಾಯಿಯೊಂದಿಗೆ ಹನುಮಾನ ನಗರದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಅಶ್ವಿನಿ ಮನೆಗೆಲಸ ಮಾಡುತ್ತಾ ಕುಟುಂಬಕ್ಕೆ ಆಸರೆಯಾಗಿದ್ದರು.
ಆದರೆ, ಮದುವೆಯಾದ ಆರಂಭದಿಂದಲೂ ಪತಿ ವಿಠ್ಠಲ್ ಪತ್ನಿಯ ಮೇಲೆ ಇಲ್ಲಸಲ್ಲದ ಸಂಶಯಪಟ್ಟು ಕ್ಷುಲ್ಲಕ ವಿಚಾರಗಳಿಗೂ ಹೊಡೆದು ಬಡಿದು ಗಲಾಟೆ ಮಾಡುತ್ತಿದ್ದನು. ದಸರಾ ಹಬ್ಬದ ದಿನವಾದ ನಿನ್ನೆ ರಾತ್ರಿಯೂ ಇಬ್ಬರ ನಡುವೆ ಗಂಭೀರ ವಾಗ್ವಾದ ನಡೆದಿದೆ. ಜಗಳ ತಾರಕಕ್ಕೇರಿದಾಗ ವಿಠ್ಠಲ್ ಆಕ್ರೋಶದಿಂದ ಪತ್ನಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಶ್ವಿನಿಯನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ಯತ್ನಿಸಲಾಯಿತಾದರೂ, ಮಾರ್ಗಮಧ್ಯದಲ್ಲೇ ಆಕೆ ಕೊನೆಯುಸಿರೆಳೆದಿದ್ದಾರೆ.
ಫೋನ್‌ನಲ್ಲಿ ಕೇಳಿಸಿತು ಮಗಳ ಚೀರಾಟ: ಕಣ್ಣೀರಿಟ್ಟ ತಾಯಿ ಕಲ್ಲವ್ವ
ಘಟನೆಯ ಭೀಕರತೆಯನ್ನು ವಿವರಿಸುತ್ತಾ ಮೃತ ಅಶ್ವಿನಿಯ ತಾಯಿ ಕಲ್ಲವ್ವ ಕಣ್ಣೀರಿಟ್ಟಿದ್ದಾರೆ:
"ದಸರಾ ಹಬ್ಬಕ್ಕೆಂದು ಮಗಳು ತವರು ಮನೆಗೆ ಬಂದಿದ್ದಳು. ಆದರೆ ಮಾವನಿಗೆ ಹುಷಾರಿಲ್ಲ, ಸೀರಿಯಸ್ ಆಗಿದ್ದಾರೆ ಎಂದು ಗಂಡ ಹೇಳಿ ಕಳುಹಿಸಿದ ಕಾರಣ ಆಕೆ ಮತ್ತೆ ಗಂಡನ ಮನೆಗೆ ಮರಳಿದ್ದಳು. ನಿನ್ನೆ ರಾತ್ರಿ ನಾನು ಫೋನ್ ಮಾಡಿದಾಗ ಮಗುವಿಗೆ ಊಟ ಮಾಡಿಸುತ್ತಿರುವುದಾಗಿ ಹೇಳಿದಳು. ಅದೇ ಸಮಯದಲ್ಲಿ ಒಮ್ಮೆಲೆ ಆಕೆಯ ಚೀರಾಟದ ಶಬ್ದ ಕೇಳಿಸಿತು. ಮಾವ ತೀರಿಕೊಂಡಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ ಇಲ್ಲಿ ಬಂದು ನೋಡಿದರೆ ನನ್ನ ಮಗಳನ್ನೇ ಅಳಿಯ ಹೊಡೆದು ಕೊಲೆ ಮಾಡಿದ್ದಾನೆ. ಸಂಶಯಪಟ್ಟು ನಿರಂತರ ಕಿರುಕುಳ ನೀಡುತ್ತಿದ್ದರೂ, ನಾವು ಸಂಸಾರ ಉಳಿಯಲಿ ಎಂದು ಬುದ್ಧಿವಾದ ಹೇಳಿ ಕಳುಹಿಸುತ್ತಿದ್ದೆವು. ಈಗ ನನ್ನ ಮಗಳು ಹೆಣವಾಗಿದ್ದಾಳೆ, ಇಬ್ಬರು ಪುಟ್ಟ ಮಕ್ಕಳು ತಾಯಿಯಿಲ್ಲದೆ ಅನಾಥರಾಗಿದ್ದಾರೆ" ಎಂದು ಗೋಳಾಡಿದರು.
ಘಟನಾ ಸ್ಥಳಕ್ಕೆ ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಮಹಜರು ನಡೆಸಿದ್ದು, ಆರೋಪಿ ವಿಠ್ಠಲ್ ಹೆಗಡೆಯನ್ನು ಬಂಧಿಸಿದ್ದಾರೆ. ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.