
ಪ್ರಪಂಚದ ಅತ್ಯಂತ ಶ್ರೀಮಂತ ಸಾರ್ವಜನಿಕ ಗಣೇಶೋತ್ಸವ: ಈ ಗಣಪನ ಸನ್ನಿಧಿಯಲ್ಲಿರುವ ಚಿನ್ನಾಭರಣದ ವಿವರ ಕೇಳಿ ದಂಗಾಗಬಹುದು!
ಪ್ರಪಂಚದ ಅತ್ಯಂತ ಶ್ರೀಮಂತ ಸಾರ್ವಜನಿಕ ಗಣೇಶೋತ್ಸವ: ಈ ಗಣಪನ ಸನ್ನಿಧಿಯಲ್ಲಿರುವ ಚಿನ್ನಾಭರಣದ ವಿವರ ಕೇಳಿ ದಂಗಾಗಬಹುದು!
71 ನೇ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಾರಂಭಕ್ಕೆ ಮುಂಬಯಿಯ ಜಿ.ಎಸ್ .ಬಿ . ಸೇವಾ ಮಂಡಲವು ನಮ್ಮೆಲ್ಲರನ್ನು ಆತ್ಮೀಯವಾಗಿ ಸ್ವಾಗತಿಸುತ್ತದೆ. ಪ್ರಪಂಚದ ಅತ್ಯಂತ ಶ್ರೀಮಂತ ಗಣೇಶೋತ್ಸವ ಸಮಾರಂಭವಿದು. *ಶ್ರೀಮಂತಾಚ ಗಣಪತಿ* ಎಂದೇ ಖ್ಯಾತಿ ಪಡೆದ ಈ ಗಣೇಶೋತ್ಸವ ಪ್ರಾರಂಭವಾಗಿರುವುದು 1954 ರಲ್ಲಿ. ದಿನಾಂಕ 25.8.2025 ರಂದು ಸಂಜೆ 7.30 ಗಂಟೆಗೆ *ವಿರಾಟ್ ದರ್ಶನ್* ವಿಗ್ರಹ ಪ್ರತಿಷ್ಠಾಪನೆಯ ಕಾರ್ಯಕ್ರಮವು ಧಾರ್ಮಿಕ ವಿಧಿವಿಧಾನಗಳೊಡನೆ ಸಾವಿರಾರು ಭಕ್ತಾದಿಗಳ ಸಮ್ಮುಖದಲ್ಲಿ ಜರುಗಿತು.
ದಿನಾಂಕ 27.8.2025 ರಿಂದ 31.8.2025 ರ ವರೆಗೆ ವಿವಿಧ ಕಾರ್ಯಕ್ರಮಗಳು ಜರಗಲಿವೆ.ಶುದ್ಧ ಜೇಡಿ ಮಣ್ಣು ಮತ್ತು ದೂವ೯ದಿಂದ ಸಿದ್ಧಪಡಿಸಿದ ಪರಿಸರ ಪ್ರೇಮಿ ಗಣಪನ ವಿಗ್ರಹವು 14.5 ಅಡಿ ಎತ್ತರವಿದ್ದು ಇಪ್ಪತ್ತೆರಡು ಕ್ಯಾರೆಟ್ ಗುಣಮಟ್ಟದ 69 ಕೆ.ಜಿ. ಚಿನ್ನದ ಆಭರಣಗಳೊಂದಿಗೆ 336 ಕೆಜಿ ಶುದ್ಧ ಬೆಳ್ಳಿಯ ಆಭರಣಗಳನ್ನು ಗಣಪ ಧರಿಸಿ ಕೊಂಡಿದ್ದು ಪ್ರಪಂಚದಲ್ಲೆ ಶ್ರೀಮಂತ ಗಣಪ ನೆಂಬ ಖ್ಯಾತಿಯನ್ನೂ ಹೊಂದಿದ್ದಾನೆ.
ನೀರಿನಲ್ಲಿ ಸುಲಭವಾಗಿ ಕರಗಬಲ್ಲ ಬಣ್ಣವನ್ನು ಮೆತ್ತಿಕೊಂಡಿರುವ ಗಣಪನ ವಿಗ್ರಹದಿಂದ ವಿಸರ್ಜನೆಯ ಬಳಿಕವೂ ಸಮುದ್ರದಲ್ಲಿನ ಜಲಚರಗಳಿಗೆ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ . 1954ರ೦ದು ಉತ್ಸವ ಪ್ರಾರಂಭವಾದ ವರ್ಷದಿಂದ ಇಂದಿನವರೆಗೂ ವಿಗ್ರಹವನ್ನು ತಯಾರಿಸುವಲ್ಲಿ ಇದೇ ಕ್ರಮವನ್ನು ಪಾಲಿಸಲಾಗುತ್ತದೆ .
ಉತ್ಸವದ ಎಲ್ಲ ದಿನಗಳಲ್ಲೂ ಭಕ್ತಾದಿಗಳಿಗೆ ಭೋಜನದ ವ್ಯವಸ್ಥೆ ಇದ್ದು ದಿನಂಪ್ರತಿ ಎರಡು ಲಕ್ಷ ಭಕ್ತಾದಿಗಳು ದೇವರ ಪ್ರಸಾದವಾಗಿ ಭೋಜನವನ್ನು ಸ್ವೀಕರಿಸುತ್ತಿದ್ದಾರೆ. ಕಳೆದ ವರ್ಷ ಒಟ್ಟು 1000000 (ಹತ್ತು ಲಕ್ಷ )ಭಕ್ತಾದಿಗಳು ಭೋಜನವನ್ನು ಸ್ವೀಕರಿಸಿರುತ್ತಾರೆ. ಈ ಐದು ದಿನಗಳ ಅವಧಿಯಲ್ಲಿ ಮೈಲುಗಟ್ಟಲೆ ಹಾಕಿರುವ ಚಪ್ಪರದಡಿ ಅತ್ಯಂತ ವ್ಯವಸ್ಥಿತವಾಗಿ ಭಕ್ತಾದಿಗಳಿಗೆ ಊಟೋಪಚಾರದ ವ್ಯವಸ್ಥೆ ಇದೆ. ಪಾಸ್ಟಿಕ್ ಬಳಕೆ ಎಲ್ಲೂ ಕಂಡುಬರುವುದಿಲ್ಲ .ಭಕ್ತಾದಿಗಳಿಗೆ ಕುಡಿಯಲು ಮಿನರಲ್ ವಾಟರ್ ವ್ಯವಸ್ಥೆ ಮಾಡಿರುತ್ತಾರೆ .
ಗಣಹೋಮ; ತುಲಾಭಾರ; ಮಹಾ ಮೂಡಗಣಪತಿ, ವರ ಭೇಟಿ ಇತ್ಯಾದಿ ವಿವಿಧ ಸೇವೆಗಳನ್ನು ಗಣಪನಿಗೆ ಸಲ್ಲಿಸಬಹುದು . ಗೌಡ್ ಸಾರಸ್ವತ ಬ್ರಾಹ್ಮಣ ಸಮಾಜದ ಖ್ಯಾತನಾಮರೊಂದಿಗೆ ವಿಶ್ವ ವಿಖ್ಯಾತ ಕ್ರಿಕೆಟ್ ಆಟಗಾರರು; ಹಿಂದಿ ಚಿತ್ರರಂಗದ ಮೇರು ನಟರು; ಖ್ಯಾತ ರಾಜಕಾರಣಿಗಳು ಇನ್ನಿತರ ಖ್ಯಾತನಾಮರು ಗಣಪನ ಶ್ರೀಮಂತ ಭಕ್ತಾದಿಗಳು. ಈ ಗಣಪನಿಗೆ ಹಲವಾರು ವಿಧದ ಸೇವೆಗಳನ್ನು ಭಕ್ತಾದಿಗಳು ಸಲ್ಲಿಸುತ್ತಿದ್ದು ಕನಿಷ್ಠ ಸೇವೆಯ ಹೆಸರು 'ಪ್ರಸಾದ ವಿತರಣೆ ಸೇವೆ'ಯಾಗಿದ್ದು ಇದರ ಸೇವಾ ದರ ರುಾ.555/. ಗರಿಷ್ಠ ಸೇವೆಯ ಹೆಸರು 'ಏಕೋತ್ತರ ಸಹಸ್ರ ಮಹಾಗಣಯಾಗ'. ಈ ಸೇವೆಯ ದರ ರೂಪಾಯಿ 555555/_
ಕಿಂಗ್ ಸರ್ಕಲ್ ನಲ್ಲಿ ಹಾಕಿರುವ ಮಹಾ ಚಪ್ಪರದಲ್ಲಿ ಸುಮಾರು ಐನೂರಕ್ಕೂ ಅಧಿಕ ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಸುಮಾರು 15000 ಜಿ. ಎಸ್. ಬಿ. ಸಮಾಜದ ಸ್ವಯಂ ಸೇವಕರು ಐದು ದಿನಗಳ ಕಾಲ ಅಹೋರಾತ್ರಿ ಗಣಪನ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಜಿ.ಎಸ್. ಬಿ. ಮಂಡಳಿ ಟ್ರಸ್ಟ್ 1950 ರಲ್ಲಿ ಸ್ಥಾಪನೆಯಾಗಿದ್ದು ಅಂದಿನಿಂದ ಇಂದಿನವರೆಗೂ ಹಲವಾರು ಸಮಾಜೋಪಯೋಗಿ ಉಪಯುಕ್ತ ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ದಾನ ಧರ್ಮ; ದತ್ತಿ ಸೇವೆ ;ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರದ ಕಾರ್ಯಕ್ರಮಗಳು ಒಳಗೊಂಡಿವೆ. ಗಣಪನ ಸಂಪೂರ್ಣ ಆಭರಣಗಳಿಗೆ ವಿಮೆ ಮಾಡಿಸಿದ್ದು ಪ್ರತಿವರ್ಷ ಲಕ್ಷಾಂತರ ರೂಪಾಯಿ ವಿಮಾ ಕಂತು ಪಾವತಿಸಲಾಗುತ್ತದೆ. ಈ ವರ್ಷ ಮಾಡಲಾದ ವಿಮೆಯ ಒಟ್ಟು ಮೊತ್ತ 474 ಕೋಟಿ ರೂಪಾಯಿಗಳು.
ವೆಬ್ ಸೈಟ್ ವಿಳಾಸ :-www.gsbsevamandal.org