-->

“ಬಂಟರ ಸಂಘದ ಗಣೇಶೋತ್ಸವ ಲೋಕಕ್ಕೆ ಮಾದರಿ“ -ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ

“ಬಂಟರ ಸಂಘದ ಗಣೇಶೋತ್ಸವ ಲೋಕಕ್ಕೆ ಮಾದರಿ“ -ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ


*ಬಂಟ್ಸ್ ಹಾಸ್ಟೆಲ್ ಗಣೇಶೋತ್ಸವ, ಧಾರ್ಮಿಕ ಸಭೆ* 

ಮಂಗಳೂರು: ಬಂಟರ ಯಾನೆ ನಾಡವರ ಮಾತೃ ಸಂಘ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ  ಬಂಟ್ಸ್ ಹಾಸ್ಟೆಲ್ ನ ಓಂಕಾರ ನಗರದಲ್ಲಿ ನಡೆದ ಸಾರ್ವಜನಿಕ ಗಣೇಶೋತ್ಸವ ಎರಡನೇ ದಿನದ ಧಾರ್ಮಿಕ ಸಭೆಯನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. 


ಬಳಿಕ ಮಾತಾಡಿದ ಅವರು, “ನಾನು ಮೊದಲ ಬಾರಿ ಇಲ್ಲಿಗೆ ಆಗಮಿಸಿದ್ದೇನೆ. ಬಹಳ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸುತ್ತಿದ್ದೀರಿ. ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಇಡೀ ಲೋಕಕ್ಕೆ ಒಳೆಯದಾಗಲಿ. ಬಂಟರ ಯಾನೆ ನಾಡವರ ಮಾತೃ ಸಂಘ ನಡೆಸುತ್ತಿರುವ ಈ ಕಾರ್ಯಕ್ರಮ ಲೋಕಕ್ಕೆ ಮಾದರಿಯಾದುದು. ನಮ್ಮೆಲ್ಲರ ಮೇಲೆ ಗಣೇಶನ ಕೃಪೆ ಸದಾ ಇರಲಿ” ಎಂದರು. 


ನಿವೃತ್ತ ಐಎಎಸ್ ಅಧಿಕಾರಿ ಟಿ.ಶ್ಯಾಮ ಭಟ್ ಮಾತಾಡಿ, “ಈ ಜಗತ್ತು ಸರ್ವೋಚ್ಛ ಶಕ್ತಿಯಿಂದ ಮುನ್ನಡೆಯಲ್ಪಡುತ್ತಿದೆ. ಬಾಲ ಗಂಗಾಧರ್ ತಿಲಕ್ ಸ್ಥಾಪಿಸಿರುವ ಗಣೇಶೋತ್ಸವ ನಿಜ ಅರ್ಥದಲ್ಲಿ ಇಡೀ ಸಮಾಜದ ಉತ್ಸವವಾಗಿದೆ. ಇದರಲ್ಲಿ ಎಲ್ಲ ಜಾತಿ ಧರ್ಮದ ಜನರು ಪಾಲ್ಗೊಳ್ಳುತ್ತಿರುವುವುದು ಸಂತಸದ ವಿಚಾರ. ಜಿಲ್ಲೆಯ ಅಭಿವೃದ್ಧಿಯ ವಿವಿಧ ಸ್ತರಗಳಲ್ಲಿ ಬಂಟ ಸಮಾಜದ ಪಾತ್ರ ಪ್ರಧಾನವಾದುದು. ಗಣೇಶೋತ್ಸವ ಇನ್ನು ಮುಂದೆಯೂ ಇನ್ನಷ್ಟು ಸಂಭ್ರಮದಲ್ಲಿ ನಡೆಯಲಿ” ಎಂದರು. 

ಫಾಚ್ರ್ಯೂ೯ನ್ ಗ್ರೂಪ್ ಆಫ್ ಹೊಟೇಲ್ ದುಬಾಯಿ ಇದರ ಎಮ್ ಡಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿ ಮಾತಾಡಿ, ““ಕಳೆದ 19 ವರ್ಷಗಳಿಂದ ನಡೆಯುತ್ತಿರುವ ಈ ಧಾರ್ಮಿಕ ಕಾರ್ಯಕ್ರಮ ಶ್ರೇಷ್ಠವಾದುದು. ಗಣಪನಿಗೆ ತೆಂಗಿನಕಾಯಿ ಅಂದರೆ ಇಷ್ಟ, ನಾರಿಕೇಳ ಯಾಗ ಗಣಪತಿಗೆ ಪ್ರಧಾನವಾದುದು. ಇದು ನಮ್ಮ ಧರ್ಮ, ಸಂಸ್ಕಾರವನ್ನು ಮುಂದಿನ ಪೀಳಿಗೆಗೂ ಪರಿಚಯ ಮಾಡುವ ಕಾರ್ಯವಾಗಿದೆ. ಬಂಟರ ಸಂಘಟನೆ ನಮ್ಮ ತುಳುನಾಡಿನ ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆಯನ್ನು ಮಕ್ಕಳಿಗೆ ತಿಳಿಸುವ ಕೆಲಸ ಮಾಡುತ್ತಿದೆ. ಇದು ನಿಜಕ್ಕೂ ಒಳ್ಳೆಯ ಕೆಲಸ. ಈ ಬಾರಿ ದುಬೈಯಲ್ಲೂ ಗಣೇಶೋತ್ಸವ ಆಚರಣೆ ಮಾಡುತ್ತಿದ್ದೇವೆ. ಅಲ್ಲಿನ ಆಡಳಿತ ಅನುಮತಿ ನೀಡಿರುವುದು ನಮ್ಮ ಭಾರತೀಯ ಸಂಸ್ಕೃತಿಗೆ ಸಿಕ್ಕ ಜಯ“ ಎಂದರು. 


ವೇದಿಕೆಯಲ್ಲಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಣಚೂರು ಮೆಡಿಕಲ್ ಕಾಲೇಜಿನ ಹಾಜಿ ಯು.ಕೆ.ಮೋನು, ಪತ್ರಕರ್ತ ವಾಲ್ಟರ್ ನಂದಳಿಕೆ, ಸಾಹಿತಿ ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ ಅವರನ್ನು ವಿವಿಧ ಕ್ಷೇತ್ರಗಳಲ್ಲಿ ಮಾಡಿರುವ ಸಾಧನೆಗಾಗಿ ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು. 
ಕಾರ್ಯಕ್ರಮದಲ್ಲಿ ಸಿಎ ಶ್ರೀನಿವಾಸ್ ಕಾಮತ್, ಬ್ಯಾಂಕ್ ಆಫ್ ಬರೋಡದ ಮಹಾ ಪ್ರಬಂಧಕ ರಾಜೇಶ್ ಖನ್ನಾ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಸುರತ್ಕಲ್ ಬಂಟರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಗುರುಪುರ ಬಂಟರ ಮಾತೃಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಮೂಡುಶೆಡ್ಡೆ, ಕಂಕನಾಡಿ ವಲಯ ಬಂಟರ ಸಂಘದ ಅಧ್ಯಕ್ಷ ಕಮಲಾಕ್ಷ ಶೆಟ್ಟಿ, ಬಿಜೈ ಬಂಟರ ಸಂಘದ ಅಧ್ಯಕ್ಷ  ಕೃಷ್ಣಮೂರ್ತಿ ರೈ, ಬಂಟರ ಯಾನೆ ನಾಡವರ ಮಾತೃಸಂಘದ ಕೋಶಾಧಿಕಾರಿ ಸಿಎ ಮನಮೋಹನ್ ರೈ ಉಪಸ್ಥಿತರಿದ್ದರು. ಬಂಟರ ಮಾತೃ ಸಂಘದ ಅಧ್ಯಕ್ಷ, ಸಿದ್ದಿ ವಿನಾಯಕ ಪ್ರತಿಷ್ಠಾನದ ಮೇನೆಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಅಧ್ಯಕ್ಷತೆ ವಹಿಸಿದ್ದರು.
ಡಾ ಮಂಜುಳಾ ಶೆಟ್ಟಿ, ಪ್ರಕಾಶ್ ಮೇಲಾಂಟ ಕಾರ್ಯಕ್ರಮ ನಿರೂಪಿಸಿದರು.
ಕೃಷ್ಣಪ್ರಸಾದ್ ರೈ ಬೆಳ್ಳಿಪ್ಪಾಡಿ ಧನ್ಯವಾದ ಸಮರ್ಪಿಸಿದರು.

Ads on article

🎁 Amazon Prime ಸದಸ್ಯರಾಗಿರಿ

Amazon Prime Offer
👉 ಉಚಿತ shipping, Prime Video, shopping deals—all in one!

Disclosure: ಈ ಲಿಂಕ್ Amazon Affiliate Program ನ ಭಾಗವಾಗಿದೆ. ನೀವು ಈ ಲಿಂಕ್ ಮೂಲಕ Prime ಸದಸ್ಯರಾಗಿದರೆ, ನಮಗೆ commission ಸಿಗಬಹುದು.

Advertise in articles 1

advertising articles 2

Advertise under the article