ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುಣ್ಯಸ್ಮರಣೆ ಆಚರಣೆ
Sunday, July 6, 2025
ಮಾಜಿ ಶಾಸಕ ದಿ. ಗೋಪಾಲ ಭಂಡಾರಿಯವರ ಪುಣ್ಯಸ್ಮರಣೆ ಆಚರಣೆ
ರಕ್ತದಾನ, ಸಸಿ ವಿತರಣೆ ಹಾಗೂ ಸಹಾಯ ಧನ ವಿತರಣೆ
ಸ್ವರ್ಗೀಯ ಗೋಪಾಲ ಭಂಡಾರಿ ಕಾರ್ಕಳ ವಿಧಾನ ಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಸಾಧಕ. ಒಬ್ಬ ಶಾಸಕನಾಗಿ ಸಾಂವಿಧಾನಿಕ ಮೌಲ್ಯದಡಿಯಲ್ಲಿ ಕಾರ್ಯ ನಿರ್ವಹಿಸಿ ಸರಕಾರದ ಸೌಲಭ್ಯಗಳನ್ನು ಜನರಿಗೆ ತಲಪಿಸುವಲ್ಲಿ ಯಶಸ್ವಿಯಾದವರು. ಭೂ ಸುಧಾರಣಾ ಮಸೂದೆಯನ್ನು ಯಶಸ್ವಿಯಾಗಿ ಜಾರಿ ಮಾಡುವಲ್ಲಿ ಗೇಣಿದಾರರ ಪರವಾಗಿ ಅಹರ್ನಿಷಿ ದುಡಿದವರು. ಅವರ ರಾಜಕೀಯ ಮತ್ತು ಸಾಮಾಜಿಕ ಬದುಕು ನಮಗೆಲ್ಲರಿಗೂ ಆದರ್ಶವಾಗಿದೆ ಎಂದು ಕಾಂಗ್ರೆಸ್ ನಾಯಕ ಉದಯ ಕುಮಾರ್ ಶೆಟ್ಟಿ ಮುನಿಯಾಲು ಹೇಳಿದರು.
ಅವರು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಯೋಜಿಸಿದ್ದ ದಿ. ಗೋಪಾಲ ಭಂಡಾರಿಯವರ 6ನೇ ಪುಣ್ಯಸ್ಮರಣೆ ಕಾರ್ಯಕ್ರಮದ ನಿಮಿತ್ತ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಕಾರ್ಕಳ ದೇವಾಡಿಗ ಸುಧಾರಕ ಸಂಘದ ಸಭಾಂಗಣದಲ್ಲಿ ನಡೆದ ನುಡಿ ನಮನ ಹಾಗು ರಕ್ತದಾನ ಶಿಬಿರದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡುತ್ತಿದ್ದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಮಾತನಾಡಿ ದಿವಂಗತ ಗೋಪಾಲ ಭಂಡಾರಿಯವರು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿಯವರ ಜನಪರ ಕಾರ್ಯಸಾಧನೆಗಳನ್ನು ಜನ ಮಾನಸಕ್ಕೆ ತಲಪಿಸಿದವರು. ಎರಡು ಅವಧಿಗೆ ಕ್ಷೇತ್ರದ ಶಾಸಕರಾಗಿ ವಿಧಾನ ಸಭೆಯಲ್ಲಿ ಹೆಬ್ರಿ ತಾಲೂಕು ಘೋಷಣೆಯ ಬಗ್ಗೆ ಧ್ವನಿ ಎತ್ತಿ ಅದನ್ನು ಸಾಧಿಸಿ ತೋರಿಸಿದವರು. ಕ್ಷೇತ್ರದ ಯುವ ರಾಜಕಾರಿಣಿಗಳು ಅವರ ಆದರ್ಶವನ್ನು ಮೈಗೂಡಿಸಿಕೊಳ್ಳ ಬೇಕು ಎಂದು ಕರೆ ನೀಡಿದರು.
ಹಿರಿಯ ನ್ಯಾಯವಾದಿ ಶೇಖರ ಮಡಿವಾಳ ಮಾತನಾಡಿ ಕಾರ್ಕಳದ ವಿಧಾನ ಸಭಾ ಕ್ಷೇತ್ರಕ್ಕೆ ಭಂಡಾರಿಯವರ ಋಣವಿದೆ. ಆಶ್ರಯ ಯೋಜನೆ, ಅಕ್ರಮ ಸಕ್ರಮ, 94ಸಿ ಮತ್ತು ಸಿಸಿ ಯಶಸ್ವೀ ಅನುಷ್ಠಾನ , ಶಿಕ್ಷಣ ಹಾಗು ಆರೋಗ್ಯ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ ದಿ. ಗೋಪಾಲ ಭಂಡಾರಿಯವರು ಯುವ ಜನಾಂಗದ ಪ್ರಾತಃ ಸ್ಮರಣೀಯ ರಾಜಕಾರಣಿ. ಅವರ ಬದುಕು ಮತ್ತು ರಾಜಧರ್ಮದ ನಡೆ ನಮಗೆಲ್ಲ ಅದರ್ಶ, ನನ್ನ ರಾಜಕೀಯ ಬದುಕಿಗೆ ಅವರ ಆದರ್ಶವೇ ಪ್ರೇರಣೆಯಾಗಿದೆ ಎಂದರು.
ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ ಸಂದರ್ಭೋಚಿತವಾಗಿ ಮಾತುಗಳನ್ನಾಡಿ ನುಡಿನಮನ ಸಲ್ಲಿಸಿದರು.
82 ಯುನಿಟ್ ರಕ್ತದಾನಗೈದ ದಾನಿಗಳಿಗೆ ಸಸಿ ಮತ್ತು ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು ಹಾಗೂ ಜರಿಗುಡ್ಡೆ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಆರ್ಥಿಕ ಸಹಾಯವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ಕಾಂಗ್ರೆಸ್ ನಾಯಕರಾದ ಮಂಜುನಾಥ ಪೂಜಾರಿ ಮುದ್ರಾಡಿ, ಜಿಲ್ಲಾ ಉಪಾದ್ಯಕ್ಷರಾದ ಸುಧಾಕರ ಕೋಟ್ಯಾನ್, ಜಾರ್ಜ್ ಕ್ಯಾಸ್ಟಲಿನೋ, ಹೆಬ್ರಿ ಬ್ಲಾಕ್ ಅಧ್ಯಕ್ಷರಾದ ಗೋಪಿನಾಥ ಭಟ್, ನವೀನ್ ಅಡ್ಯಂತಾಯ, ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಭಾನು ಭಾಸ್ಕರ ಪೂಜಾರಿ, ವಿವೇಕಾನಂದ ಶೆಣೈ, ಕಿರಣ್ ಹೆಗ್ಡೆ, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರುಗಳಾದ ರೀನಾ ಡಿಸೋಜ, ಮಾಜಿ ಪುರಸಭಾ ಅಧ್ಯಕ್ಷ ಸುಭಿತ್ ಎನ್.ಆರ್, ಕೆ.ಎಮ್.ಎಪ್ ನಿರ್ದೇಶಕರಾದ ಸುಧಾಕರ ಶೆಟ್ಟಿ ಮುಡಾರು, ಉಮೇಶ್ ರಾವ್ ಬಜಗೋಳಿ, ಸಿರಿಯಣ್ಣ ಶೆಟ್ಟಿ ಹಿರ್ಗಾನ, ಉದಯ ಶೆಟ್ಟಿ ಕುಕ್ಕುಂದೂರು, ಅನಿಲ್ ಪೂಜಾರಿ ಕುಕ್ಕುಂದೂರು, ಚೇತನ್ ಶೆಟ್ಟಿ ಕೊರಳ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಶೆಟ್ಟಿ ಬಜಗೋಳಿ, ಸೂರಜ್ ಶೆಟ್ಟಿ ನಕ್ರೆ,
ಮಲಿಕ್ ಅತ್ತೂರು, ಮಂಜುನಾಥ ಜೋಗಿ. ಅನಿತಾ ಡಿ'ಸೋಜಾ ಬೆಳ್ಮಣ್ ಹಾಗೂ ವಿವಿಧ ಘಟಕಗಳ ಅಧ್ಯಕ್ಷರುಗಳು, ನಾಮ ನಿರ್ದೇಶಿತ ಸದಸ್ಯರುಗಳು, ಪುರಸಭಾ ಸದಸ್ಯರು, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರುಗಳು, ಪಂಚಾಯತ್ ಸದಸ್ಯರುಗಳು, ಚುನಾಯಿತ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷರಾದ ಅಜಿತ್ ಹೆಗ್ಡೆ ಸ್ವಾಗತಿಸಿ ನಗರ ಅಧ್ಯಕ್ಷ ರಾಜೇಂದ್ರ ದೇವಾಡಿಗ ಧನ್ಯವಾದವಿತ್ತು ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ನಿರೂಪಿಸಿದರು.