ಪ್ರೀತಿಸಿ ಬೇರೆಯಾದ ಹುಡುಗಿಗೆ ಅಶ್ಲೀಲ ಮೆಸೇಜ್: ಯುವತಿಯ ಗೆಳೆಯರಿಂದ ಯುವಕನ ಬಟ್ಟೆ ಬಿಚ್ಚಿ, ಮರ್ಮಾಂಗ ತುಳಿದು ಹಲ್ಲೆ
Monday, July 7, 2025
ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಹುಡುಗಿಯ ವಿಚಾರಕ್ಕೆ ಯುವಕನ ಬಟ್ಟೆ ಬಿಚ್ಚಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಕುಶಾಲ್ ಎಂಬ ಯುವಕನ ಮೇಲೆ ಈ ದಾಳಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಲದೇವನಹಳ್ಳಿ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಲೇಜು ದಿನಗಳಲ್ಲಿ ಕುಶಾಲ್ ಮತ್ತು ಒಬ್ಬ ಯುವತಿಯ ನಡುವೆ ಪ್ರೀತಿಯ ಸಂಬಂಧವಿತ್ತು. ಎರಡು ವರ್ಷಗಳ ಕಾಲ ಚಿಗುರಿದ ಈ ಪ್ರೀತಿ ಕೆಲವು ತಿಂಗಳ ಹಿಂದೆ ಮುರಿದುಬಿತ್ತು. ಈ ವೇಳೆ ಯುವತಿಗೆ ಬೇರೊಬ್ಬ ಯುವಕನ ಪರಿಚಯವಾಗಿತ್ತು. ಇದನ್ನು ಸಹಿಸಲಾಗದ ಕುಶಾಲ್, ಯುವತಿಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಇದರಿಂದ ಕುಪಿತಗೊಂಡ ಯುವತಿಯ ಗೆಳೆಯ ಹಾಗೂ ಆತನ ಸ್ನೇಹಿತರು, ಕುಶಾಲ್‌ನನ್ನು ಮಾತುಕತೆಗೆಂದು ಬಾಗಲಗುಂಟೆಯ ಎಜಿಪಿ ಲೇಔಟ್‌ಗೆ ಕರೆಸಿಕೊಂಡು ಅಪಹರಿಸಿದ್ದಾರೆ.
ಬಳಿಕ, ಆರೋಪಿಗಳಾದ ಹೇಮಂತ್, ಯಶವಂತ್, ಶಿವಶಂಕರ್, ಮತ್ತು ಶಶಾಂಕ್ ಗೌಡ ಕುಶಾಲ್‌ನನ್ನು ಕಾರಿನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಕುಶಾಲ್‌ನ ಬಟ್ಟೆ ಬಿಚ್ಚಿ, ಆತನ ಮರ್ಮಾಂಗವನ್ನು ತುಳಿದು ವಿಕೃತಿ ಮೆರೆದಿದ್ದಾರೆ.
ಈ ಘಟನೆ ಕುರಿತು ಸೋಲದೇವನಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆರೋಪಿಗಳಾದ ಹೇಮಂತ್, ಯಶವಂತ್, ಶಿವಶಂಕರ್, ಮತ್ತು ಶಶಾಂಕ್ ಗೌಡರನ್ನು ಬಂಧಿಸಿದ್ದಾರೆ. ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ.