ಪತ್ನಿಯ ವಿಚ್ಛೇದನ ಕೊಡಬೇಕೆನ್ನುವ ಪೀಡನೆಗೆ ಬೇಸತ್ತು ಟೆಕ್ಕಿ ರಾಜಭವನದ ಮುಂಭಾಗ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಪತ್ನಿಯ ಪೀಡನೆಯಿಂದ ಬೇಸತ್ತು ಟೆಕ್ಕಿಯೊಬ್ಬ ರಾಜಭವನದ ಮುಂದೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.


ಹೆಬ್ಬಾಳ ನಿವಾಸಿ ಜುಹೇಲ್‌ ಅಹ್ಮದ್‌ (26) ಆತ್ಮಹತ್ಯೆಗೆ ಯತ್ನಿಸಿದವರು.

ರವಿವಾರ ಸಂಜೆ 4.30ರ ಸುಮಾರಿಗೆ ರಾಜಭವನದ ಬಳಿ ಬಂದಿದ್ದ ಜುಹೇಲ್ ಅಹ್ಮದ್ ಏಕಾಏಕಿ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪತ್ರಕರ್ತರು ಪೆಟ್ರೋಲ್‌ ಬಾಟಲಿ ಹಾಗೂ ಬೆಂಕಿ ಪಟ್ಟಣವನ್ನು ಕಸಿದುಕೊಂಡು ಅನಾಹುತ ತಪ್ಪಿಸಿದ್ದಾರೆ ಎಂದು ವಿಧಾನಸೌಧ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡಿನ ಸಾಫ್ಟ್‌ವೇರ್‌ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಜುಹೇಲ್‌ ಅಹ್ಮದ್, ಸದ್ಯ ಹೆಬ್ಬಾಳದಲ್ಲಿ ವಾಸವಾಗಿದ್ದಾರೆ. ವರ್ಕ್ ಫ್ರಮ್ ಹೋಮ್ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವ ಅವರು 2024ರ ನವೆಂಬರ್‌ನಲ್ಲಿ ಚಿಕ್ಕಬಳ್ಳಾಪುರದ ಜವೇರಿಯಾ ಮುಸ್ಕಾನ್‌ ಎಂಬಾಕೆಯನ್ನು ಮದುವೆಯಾಗಿದ್ದರು. ಕೆಲದಿನಗಳ ಹಿಂದೆ ಜುಹೇಲ್‌ ಹಾಗೂ ಮಸ್ಕಾನ್ ದಂಪತಿ ನಡುವೆ ಕೌಟುಂಬಿಕ ವಿಚಾರಕ್ಕೆ ಜಗಳವಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.


''ಪತ್ನಿ ಜವೇರಿಯಾ ಮುಸ್ಕಾನ್‌ಗೆ ಆರೋಗ್ಯ ಸಮಸ್ಯೆಯಿದ್ದು, ಹತ್ತಾರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದೇನೆ. ಆದರೂ ಆಕೆ ಕ್ಷುಲ್ಲಕ ಕಾರಣಕ್ಕೆ ವಿಚ್ಛೇದನ ಕೊಡುವಂತೆ ಪೀಡಿಸುತ್ತಿದ್ದಾಳೆ. ವಿಚ್ಛೇದನ ಕೊಡಲು ನಾನು ಒಪ್ಪದ್ದಿದ್ದಾಗ, ಸುಳ್ಳು ಪ್ರಕರಣ ದಾಖಲಿಸಿ ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಮತ್ತು ಸಾಯಿಸುವುದಾಗಿ ಬೆದರಿಕೆ ಹಾಕುತ್ತಿದ್ದಾಳೆ,'' ಎಂದು ಜುಹೇಲ್‌ ಪೊಲೀಸರ ಎದುರು ಹೇಳಿಕೆ ದಾಖಲಿಸಿದ್ದಾರೆ.