ಲಕ್ನೋ: ಸಂಚಾರದಲ್ಲಿದ್ದ ಕಾರಿನಲ್ಲಿಯೇ ಅತ್ಯಾಚಾರ ಎಸಗುವುದನ್ನು ವಿರೋಧಿಸಿದ ಬ್ಯೂಟಿಷಿಯನ್‌ನನ್ನು ಚೂರಿಯಿಂದ ಇರಿದು ಕೊಲೆಗೈದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ.
ಸಂತ್ರಸ್ತೆ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು.
ಸುಧಾಂಶು ಎಂಬಾತ ಮದುವೆಯೊಂದಕ್ಕೆ ಮದರಂಗಿ ಹಚ್ಚಲು ಕರೆದಿದ್ದ. ಅವರನ್ನು ಕರೆತರಲು ಕಳುಹಿಸಿದ್ದ ಕೆಂಪು ಬಣ್ಣದ ಕಾರಿನಲ್ಲಿ ಅಜಯ್, ವಿಕಾಸ್ ಮತ್ತು ಆದರ್ಶ್ ಎಂಬವರು ಇದ್ದರು. ಬ್ಯೂಟಿಷಿಯನ್ ಮತ್ತು ಆಕೆಯ ಸಹೋದರಿ ಅದೇ ಕಾರಿನಲ್ಲಿ ಮದುವೆ ಮನೆಗೆ ಬಂದಿದ್ದರು. ಮದರಂಗಿ ಹಚ್ಚಿದ ಬಳಿಕ ಬ್ಯೂಟಿಷಿಯನ್ ಮತ್ತು ಆಕೆಯ ಸಹೋದರಿಯನ್ನು ಮತ್ತೆ ವಾಪಾಸ್ಸು ಆಕೆಯ ಮನೆಗೆ ಕರೆದುಕೊಂಡು ಹೋಗುವಾಗ ಕಾರಿನಲ್ಲಿ ಅಜಯ್, ವಿಕಾಸ್ ಮತ್ತು ಆದರ್ಶ್ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾರೆ.
'ಚಲಿಸುತ್ತಿದ್ದ ಕಾರಿನಲ್ಲಿ ಅವರು ತನ್ನ ಮೇಲೆ ಹಾಗೂ ತನ್ನ ಸಹೋದರಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಯತ್ನಿಸಿದ್ದಾರೆ. ಇದಕ್ಕೆ ನನ್ನ ಸಹೋದರಿ ವಿರೋಧಿಸಿದಾಗ, ಅಜಯ್ ಆಕೆಯ ಕುತ್ತಿಗೆಗೆ ಇರಿದಿದ್ದಾನೆ. ಇದಾದ ಬಳಿಕ ಅವರು ಕಾರನ್ನು ವಿಭಜಕಕ್ಕೆ ಢಿಕ್ಕಿ ಹೊಡೆದಿದ್ದಾರೆ. ನಾವಿಬ್ಬರು ಕಾರಿನಲ್ಲಿ ಸಿಲುಕಿಕೊಂಡೆವು' ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.
ಘಟನೆಯ ಬಗ್ಗೆ ಬ್ಯೂಟಿಷಿಯನ್ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಸ ಪೊಲೀಸರು ವಿಕಾಸ್ ಮತ್ತು ಆದರ್ಶ್‌ನನ್ನು ವಶಕ್ಕೆ ಪಡೆದಿದ್ದಾರೆ. ಅಜಯ್ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಎಸಿಪಿ ವಿಕಾಸ್ ಪಾಂಡೆ ಹೇಳಿದ್ದಾರೆ.