ಲೀಗಲ್, ಪೊಲೀಸ್ ನೋಟೀಸ್ ಆಧಾರದಲ್ಲಿ ದೊರೆಯದ ಸಾಹಿತ್ಯ ಪರಿಷತ್ ಸಭಾಂಗಣ: ಪೂರ್ವನಿಗದಿತ 'ಸೌಜನ್ಯ' ಪರ ಸಮಾಲೋಚನಾ ಸಭೆ ಹಠಾತ್ ಮುಂದೂಡಿಕೆ
09 -03 -2025ರಂದು ರವಿವಾರ ಬೆಳಿಗ್ಗೆ 10.30 ಕ್ಕೆ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆಯಲಿದ್ದ ಪೂರ್ವನಿಗದಿತ 'ಸೌಜನ್ಯ' ಪರ ಸಮಾಲೋಚನಾ ಸಭೆ ಹಠಾತ್ ಮುಂದೂಡಿಕೆಯಾಗಿದೆ.
ಕನ್ನಡ ಸಾಹಿತ್ಯ ಪರಿಷತ್‌ಗೆ ಜಾರಿಗೊಳಿಸಲಾದ ಕಾನೂನು ತಿಳುವಳಿಕಾ ನೋಟೀಸ್(ಲೀಗಲ್ ನೋಟಿಸ್) ಮತ್ತು ಪೊಲೀಸ್ ನೋಟಿಸ್ ಆಧಾರದಲ್ಲಿ ಸಂಘಟಕರಿಗೆ ಸಭಾಂಗಣವನ್ನು ನಿರಾಕರಿಸಲಾಗಿದೆ. ಈ ಬಗ್ಗೆ ಸಂಘಟಕರಿಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಅಧಿಕೃತ ನೋಟೀಸ್ ಮೂಲಕ ಸೂಚನೆ ನೀಡಿದ್ದಾರೆ.
ಸೌಜನ್ಯ ಪರ ಸಾಹಿತಿ, ಚಿಂತಕ, ಪತ್ರಕರ್ತರು, ಹೋರಾಟಗಾರರ ಸಮಾಲೋಚನಾ ಸಭೆ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ನ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಕರೆಯಲಾಗಿತ್ತು. ಆದರೆ ಕನ್ನಡ ಸಾಹಿತ್ಯ ಪರಿಷತ್ ಒತ್ತಡಕ್ಕೊಳಗಾಗಿ ಕೊನೇ ಕ್ಷಣದಲ್ಲಿ ಸಭಾಂಗಣದ ಅನುಮತಿಯನ್ನು ರದ್ದುಗೊಳಿಸಿದೆ ಎಂದು ಆರೋಪಿಸಿರುವ ಸಂಘಟಕರು, ಸಮಾಲೋಚನಾ ಸಭೆಯನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ.
ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಂಘಟಕರು ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣವನ್ನು ಕಾಯ್ದಿರಿಸಿ ಆ ಸಭಾಂಗಣದ ಬಾಡಿಗೆ ಪಾವತಿಸಿ ಕಾರ್ಯಕ್ರಮಕ್ಕೆ ನಿಗದಿಪಡಿಸಿದ್ದರು. ಸದ್ರಿ ಕಾರ್ಯಕ್ರಮದ ಬಗ್ಗೆ ಸಂಘಟಕರು ಭವನದ ಮಾಲಕರಾದ ಪರಿಷತ್‌ನ ಅಧಿಕಾರಿಗಳ ಜೊತೆಗೆ ಚರ್ಚೆಯನ್ನೂ ನಡೆಸಿದ್ದರು.
ಆದರೆ ಸಾಹಿತ್ಯ ಪರಿಷತ್ ಗೆ ಬಂದ ಲೀಗಲ್ ನೋಟಿಸ್ ಮತ್ತು ಪೊಲೀಸ್ ನೋಟಿಸ್ ಆಧಾರದಲ್ಲಿ ಸಭಾಂಗಣವನ್ನು ನೀಡಲಾಗುವುದಿಲ್ಲ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು 08.03.2025 ರಂದು ರಾತ್ರಿ 10.30 ಕ್ಕೆ ಸಂಘಟಕರಲ್ಲೋರ್ವರಾದ ಬೈರಪ್ಪ ಹರೀಶ್ ಕುಮಾರ್ ಅವರಿಗೆ ಲಿಖಿತ ನೋಟಿಸ್ ಜಾರಿಗೊಳಿಸಿದ್ದಾರೆ.
ದಿಢೀರ್ ಸಭಾಂಗಣ ನಿರಾಕರಣೆಯ ಹಿನ್ನಲೆಯಲ್ಲಿ 09.03.2025 ರವಿವಾರ 10.30 ಕ್ಕೆ ಅಕ್ಕಮಹಾದೇವಿ ಸಭಾಂಗಣ, ಕನ್ನಡ ಸಾಹಿತ್ಯ ಪರಿಷತ್ ನಲ್ಲಿ ನಡೆಸಲುದ್ದೇಶಿಸಿದ್ದ "ಸೌಜನ್ಯ ಸಮಾಲೋಚನಾ ಸಭೆ"ಯನ್ನು ಮುಂದೂಡಲಾಗಿದೆ.
"ಮುಂಡಾಸುಧಾರಿಗಳು/ ಊಳಿಗಮಾನ್ಯದ ಪಳಿಯುಳಿಕೆಗಳು ಸಭೆಗೆ ತಾತ್ಕಾಲಿಕ ಅಡ್ಡಿ ಮಾಡಿರಬಹುದು. ಆದರೆ ಸಮಾನ ಮನಸ್ಕರೆಲ್ಲರೂ ಒಂದು ದೊಡ್ಡ ತಂಡವಾಗಿ ಮುಂಡಾಸುದಾರಿಗಳ ವಿರುದ್ದ ಕಾನೂನು ಹೋರಾಟವೂ ಸೇರಿದಂತೆ ಎಲ್ಲಾ ಚಳವಳಿಗಳನ್ನು ಇನ್ನಷ್ಟೂ ಪರಿಣಾಮಕಾರಿಯಾಗಿ ಮುಂದುವರೆಸಲಿದೆ" ಎಂದು ಸಮಾನ ಮನಸ್ಕರು, ಬೆಂಗಳೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.