ಮುಖಕ್ಕೆ ಮುಸುಕು ಹಾಕಿ ಅಜ್ಜಿಯನ್ನೇ ದರೋಡೆಗೈದ ಮೊಮ್ಮಗ


ಭಟ್ಕಳ: ಮುಖಕ್ಕೆ ಮುಸುಕು ಹಾಕಿ ಕಳ್ಳನಂತೆ ಲ ಮೊಮ್ಮಗನೇ ವಯೋವೃದ್ಧೆ ಅಜ್ಜಿಯನ್ನು ದರೋಡೆಗೈದಿರುವ ಘಟನೆ ಭಟ್ಕಳದಲ್ಲಿ ನಡೆದಿದೆ.

ಮಾ.17ರಂದು ರಮಝಾನ್ ಸಂದರ್ಭ ಮನೆಯವರೆಲ್ಲಾ ಜೊತೆಯಾಗಿ ಸೆಹರಿ ಉಪಹಾರ ಸೇವಿಸಿದ್ದರು. ಆ ಬಳಿಕ ಪುರುಷರು ಬೆಳಗ್ಗಿನ ನಮಾಝ್‌ಗೆ ಮಸೀದಿಗೆ ತೆರಳಿದ್ದರು. ಮನೆಯಲ್ಲಿದ್ದ ಮಹಿಳೆಯರು ಪ್ರಾರ್ಥನೆಯಲ್ಲಿ ನಿರತರಾಗಿದ್ದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ಮೊಮ್ಮಗ ತಾಜಮ್ಮುಲ್ ಹಸನ್ ಅಕ್ಕೇರಿ(46) ಮುಖಕ್ಕೆ ಮುಸುಕು ಹಾಕಿಕೊಂಡು ಮನೆಗೆ ನುಗ್ಗಿ ವಯೋವೃದ್ಧೆಯ ಬಾಯಿ ಮುಚ್ಚಿ, ಕತ್ತು ಹಿಸುಕಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದನು.

ದರೋಡೆಯ ಬಗ್ಗೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಭಟ್ಕಳ ನಗರ ಠಾಣಾ ಪೊಲೀಸ್‌ ಉಪನಿರೀಕ್ಷಕ ನವೀನ್ ನಾಯ್ಕ್ ನೇತೃತ್ವದ ಪೊಲೀಸರ ತಂಡ ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಮನೆಯಲ್ಲಿದ್ದ ಸಿಸಿಟಿವಿಯನ್ನು ಪರಿಶೀಲನೆಯನ್ನು ನಡೆಸಿದರು. ಈ ವೇಳೆ ಕೃತ್ಯವು 4 ನಿಮಿಷಗಳಲ್ಲಿ ನಡೆದಿದೆ ಎಂಬುವುದನ್ನು ಪತ್ತೆ ಹೆಚ್ಚಿದ್ದಾರೆ.

ದರೋಡೆಯ ಹಿನ್ನೆಲೆಯಲ್ಲಿ ಸಂತ್ರಸ್ತೆಯ ಮೊಮ್ಮಗ ತಾಜಮ್ಮುಲ್ ಹಸನ್ ಅಕ್ಕೇರಿ ಅಜ್ಜಿಯ ಪರವಾಗಿ ಪೊಲೀಸ್‌ ದೂರು ನೀಡಿದನು. ಅಪರಾಧಿಯನ್ನು ಪತ್ತೆಹಚ್ಚಲು ಆತ ಪೊಲೀಸ್ ಅಧಿಕಾರಿಗಳಿಗೆ ಸಹಾಯ ಮಾಡುವಂತೆ ನಟಿಸಿದ್ದನು. ಆದರೆ, ತನಿಖೆ ಮುಂದುವರಿಯುತ್ತಿದ್ದಂತೆ ಪೊಲೀಸರು ಆತನನ್ನೇ ಬಂಧಿಸಿದ್ದಾರೆ.

ಅಪರಾಧ ಕೃತ್ಯದ ಬಳಿಕ, ಆರೋಪಿ ಆರಂಭದಲ್ಲಿ ಮನೆಯಲ್ಲಿಯೇ ಇದ್ದನು. ಆದರೆ, ಎರಡು ದಿನಗಳ ನಂತರ ಮನೆಯಿಂದ ಪರಾರಿಯಾಗಿದ್ದಾನೆ. ಈ ಮೊದಲೂ ಆತ ಇಂತಹದ್ದೇ ಕೃತ್ಯವನ್ನು ಎಸಗಿದ್ದ. ಈ ವೇಳೆ ಕುಟುಂಬವು ಮಧ್ಯಪ್ರವೇಶಿಸಿ ಇತ್ಯರ್ಥ ಮಾಡಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.