ಶಿವರಾತ್ರಿಯಂದು ತಾಜ್‌ಮಹಲ್‌ನಲ್ಲಿ ಮಹಿಳೆಯಿಂದ ಶಿವಲಿಂಗಕ್ಕೆ ಜಲಾಭಿಷೇಕ: ವೈರಲ್ ವೀಡಿಯೋ ನೋಡಿ ನೆಟ್ಟಿಗರು ಏನಂದ್ರು ಗೊತ್ತಾ?


ಆಗ್ರಾ: ದೇಶಾದ್ಯಂತ ಇಂದು ಶಿವರಾತ್ರಿ ಸಂಭ್ರಮ ಮನೆ ಮಾಡಿದೆ. ಜನರು ಜಾಗರಣೆ ಮಾಡಿ ಭಕ್ತಿಯಿಂದ ಶಿವನನ್ನು ಆರಾಧಿಸುತ್ತಿದ್ದಾರೆ. ಆದರೆ ಶಿವರಾತ್ರಿಯ ದಿನದಂದೇ ಮಹಿಳೆಯೊಬ್ಬರು ತಾಜ್ ಮಹಲ್‌ನೊಳಗೆ ಶಿವಲಿಂಗದ ಮೇಲೆ ಜಲಾಭಿಷೇಕ ಮಾಡಿದ್ದು, ಐತಿಹಾಸಿಕ ಸ್ಮಾರಕದಲ್ಲಿ ಈ ಮಾಡಿರುವುದು ಭದ್ರತೆ ಸೇರಿದಂತೆ ಸ್ಮಾರಕದ ಸುರಕ್ಷತೆಯ ಬಗ್ಗೆ ತೀವ್ರ ಕಳವಳ ಹುಟ್ಟುಹಾಕಿದೆ.

ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಮಹಿಳಾ ವಿಭಾಗದ ಜಿಲ್ಲಾಧ್ಯಕ್ಷೆ ಮೀರಾ ರಾಥೋಡ್ ಶಿವಲಿಂಗದ ಮೇಲೆ ಜಲಾಭಿಷೇಕ ಮಾಡಿ ಅಗರಬತ್ತಿ ಹಚ್ಚಿ ಪೂಜೆ ಮಾಡುತ್ತಿರುವುದನ್ನು ನೋಡಬಹುದಾಗಿದೆ.

ಬಳಿಕ ಮಾತನಾಡಿರುವ ಮೀರಾ ರಾಥೋಡ್, ಮಹಾಕುಂಭಮೇಳದಿಂದ ಈ ಪವಿತ್ರ ಗಂಗಾಜಲವನ್ನು ತರಲಾಗಿದೆ. ತಾಜ್ ಮಹಲ್ ಈ ಹಿಂದೆ ತೇಜೋ ಮಹಾಲಯ ಆಗಿತ್ತು. ತಾನು ಶಿವಲಿಂಗಕ್ಕೆ ಜಲಾಭಿಷೇಕ ಮಾಡುವ ಮೂಲಕ ಪರಂಪರೆಯ ರಚನೆಯನ್ನು ಶುದ್ದೀಕರಿಸುವ ಕೆಲಸ ಮಾಡುತ್ತಿರುವುದಾಗಿ ಮಹಿಳೆ ಹೇಳಿದ್ದಾರೆ.

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಾರಂಪರಿಕೆ ಸ್ಮಾರಕದ ಭದ್ರತೆ ಹಾಗೂ ಸುರಕ್ಷತೆಯ ಬಗ್ಗೆ ತೀವ್ರ ಕಳವಳವನ್ನು ಹುಟ್ಟುಹಾಕಿದೆ. ಅನೇಕರು ಭದ್ರತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು, ಪೊಲೀಸರಿಗೆ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಕೆಲವರು ಮಹಿಳೆಯ ನಡೆಯನ್ನು ಸಮರ್ಥಿಸಿಕೊಂಡಿದ್ದು, ಸದ್ಯ ಈ ವಿಡಿಯೋ ವೈರಲ್ ಆಗಿದೆ.