ನಟ ಸೈಫ್ ಮೇಲಿನ ದಾಳಿ ಪ್ರಕರಣಕ್ಕೆ ಟ್ವಿಸ್ಟ್- ಬಂಧಿತ ಶಂಕಿತ ವ್ಯಕ್ತಿ ಬೆರಳಚ್ಚಿಗೂ ಅಪರಾಧದ ಸ್ಥಳದಲ್ಲಿ ದೊರಕಿರುವ ಬೆರಳಚ್ಚಿಗೂ ಹೋಲಿಕೆಯಿಲ್ಲ



ಮುಂಬೈ: ಮನೆಗೆ ನುಗ್ಗಿ ನಟ ಸೈಫ್ ಅಲಿ ಖಾನ್ಏಲೆ ನಡೆದ ದಾಳಿ ಪ್ರಕರಣದಲ್ಲಿ ಬಂಧಿತನಾಗಿರುವ ಶಂಕಿತ ಆರೋಪಿಯ ಬೆರಳಚ್ಚಿಗೂ ಅಪರಾಧ ನಡೆದ ಸ್ಥಳದಲ್ಲಿ ದೊರಕಿರುವ ಬೆರಳಚ್ಚಿಗೂ ಹೋಲಿಕೆಯಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಜನವರಿ 16ರಂದು ಕಳವು ನಡೆಸಲೆಂದು ನಟ ಸೈಫ್ ಮನೆಗೆ ನುಗ್ಗಿದ್ದ ದುಷ್ಕರ್ಮಿಯೊಬ್ಬ ನಟನನ್ನು ಚಾಕುವಿನಿಂದ ತಿವಿದು ಗಾಯಗೊಳಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಷಲ್ ಇಸ್ಲಾಂ ಷೆಹಜಾದ್ ಎಂಬ ಬಾಂಗ್ಲಾದೇಶಿಯನನ್ನು ಬಂಧಿಸಿದ್ದರು. ಬೆರಳಚ್ಚು ಸಂಬಂಧ ಮಹಾರಾಷ್ಟ್ರ ರಾಜ್ಯದ ಕ್ರಿಮಿನಲ್ ತನಿಖಾ ವಿಭಾಗ (ಸಿಐಡಿ) ಸಲ್ಲಿಸಿರುವ ವರದಿಯು ಮುಂಬೈ ಪೊಲೀಸರಿಗೆ ಹಿನ್ನಡೆಯಾಗಿದೆ. ತಪ್ಪಾದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂಬ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಅಭಿಪ್ರಾಯದ ನಡುವೆಯೇ ಹೊರಬಿದ್ದಿರುವ ಸಿಐಡಿ ವರದಿ ಕೂಡ ಅದನ್ನು ಸಮರ್ಥಿಸುವಂತಿದೆ.

 ಕೃತ್ಯ ನಡೆದ 3ದಿನಗಳ ಬಳಿಕ, ಮುಂಬೈ ಪೊಲೀಸರು ಮತ್ತು ಕೆಂ ಬ್ರಾಂಚ್ ಪೊಲೀಸರು ಷಹೀಲ್‌ನನ್ನು ಥಾಣೆಯಲ್ಲಿ ಬಂಧಿಸಿದ್ದರು. ಅಪರಾಧ ನಡೆದ ಸ್ಥಳದಿಂದ ಒಟ್ಟು 19 ಫಿಂಗರ್‌ಪ್ರಿಂಟ್ ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದೆ. ಅವುಗಳಲ್ಲಿ ಯಾವುದೂ ಷಲ್ ಬೆರಳಚ್ಚಿಗೆ ತಾಳೆಯಾಗುವುದಿಲ್ಲ ಎಂದು ವರದಿ ಹೇಳಿದೆ.

ಇರಿತಕ್ಕೊಳಗಾದ ಸೈಫ್, ಮುಂಬೈನ ಪ್ರಖ್ಯಾತ ಲೀಲಾವತಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಂಡು ಮನೆಗೆ ವಾಪಸಾಗಿದ್ದಾರೆ. ಚಿಕಿತ್ಸೆ ವೆಚ್ಚದ ಬಗ್ಗೆ ಸೈಫ್ ಕುಟುಂಬ ಸಲ್ಲಿಸಿರುವ ಮೆಡಿಕ್ಲೇಮ್‌ಗೆ ಖಾಸಗಿ ವಿಮಾ ಸಂಸ್ಥೆ ನಿವಾ ಬುಪಾ ತಕ್ಷಣವೇ ಅನುಮೋದನೆ ನೀಡಿತ್ತು. ಇದಕ್ಕೆ ಮುಂಬೈಯ ವೈದ್ಯಕಿಯ ವೃತ್ತಿಪರರ ಸಂಸ್ಥೆ ಅಸೋಸಿಯೇಷನ್ ಮೆಡಿಕಲ್ ಕನ್ಸಲ್ಟಂಟ್ಸ್ ಆಕ್ಷೇಪ ವ್ಯಕ್ತಪಡಿಸಿದೆ. ಸೆಲೆಬ್ರಿಟಿಗಳ “ಆದ್ಯತಾ ಚಿಕಿತ್ಸೆ'' ಕುರಿತು ಅದು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ ದೂರು ಸಲ್ಲಿಸಿದೆ.