ಭಾರತಾದ್ಯಂತ ಶ್ವಾನದೊಂದಿಗೆ ಸೋಲೋ ಟ್ರಿಪ್ ಹೊರಟ ಯುವಕ: ಕಾಲ್ನಡಿಗೆಯಲ್ಲಿಯೇ 13ಸಾವಿರ ಕಿ.ಮೀ. ಪ್ರಯಾಣ


ನವದೆಹಲಿ: 'ಚಾರ್ಲಿ 777' ಸಿನಿಮಾದಲ್ಲಿ ನಟ ರಕ್ಷಿತ್ ಶೆಟ್ಟಿ ಸುತ್ತಾಟ ನಡೆಸಿದಂತೆ ಇಲ್ಲೊಬ್ಬ ಯುವಕ ತನ್ನ ಪ್ರೀತಿಯ ಶ್ವಾನದೊಂದಿಗೆ ಭಾರತಾದ್ಯಾಂತ ಬರೋಬ್ಬರಿ 13 ಸಾವಿರ ಕಿ.ಮೀ. ಕಾಲು ನಡಿಗೆಯಲ್ಲಿ ಪ್ರಯಾಣ ಮಾಡಿದ್ದಾನೆ.

ಒಬ್ಬಂಟಿಯಾಗಿ ಸುತ್ತಾಟ ನಡೆಸಲು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದೇ ರೀತಿ ಯತಿಗೌ‌ರ್ ಎಂಬ ಯುವಕ ದೇಶದಲ್ಲಿ ವಿವಿಧ ಸ್ಥಳಗಳನ್ನು ಸುತ್ತುವ ಮೂಲಕ ವಿಭಿನ್ನ ಜನರ, ಸಂಸ್ಕೃತಿ ಮತ್ತು ದೇವಸ್ಥಾನಗಳನ್ನು ದರ್ಶಿಸಿ ತನ್ನನ್ನು ತಾನು ಕಂಡುಕೊಂಡುತ್ತಿದ್ದಾನೆ. 2022ರಲ್ಲಿ ಯತಿ ಗೌರ್ ತನ್ನ ಶ್ವಾನದೊಂದಿಗೆ ಉತ್ತರಾಖಂಡದಿಂದ ನಡಿಗೆಯ ಪ್ರಯಾಣ ಆರಂಭಿಸಿದ್ದಾನೆ. ಬೈಸಿಕಲ್‌ನಲ್ಲಿ ಪ್ರಯಾಣ ಮಾಡಿದರೆ ದಿನಕ್ಕೆ 55ಕಿ.ಮೀ ಕ್ರಮಿಸಬಹುದು. ಆದರೆ, ಕಾಲ್ನಡಿಗೆಯಲ್ಲಿ ನಾನು ಪ್ರತಿದಿನ 25 ಕಿ.ಮೀ ನಡೆಯುತ್ತೇನೆ. ಇದರಿಂದ ಸಮಯ ಉಳಿತಾಯದೊಂದಿಗೆ ಮತ್ತೊಂದು ಪ್ರಯಾಣ ಬೆಳೆಸಲು ಅಯಾಸವಾಗುವುದಿಲ್ಲ ಎನ್ನುತ್ತಿದ್ದಾರೆ.

ಇನ್ನು ಯತಿಗೌರ್‌ ಚಾರ್‌ಧಾಮ್- ಬದರಿನಾಥ್- ಕೇದಾರನಾಥ್-ಪುರಿ ಮತ್ತು ರಾಮೇಶ್ವರಂ ಸೇರಿದಂತೆ 12 ಜ್ಯೋತಿರ್ಲಿಂಗಗಳು ಪ್ರವಾಸ ಮುಗಿಸಿದ್ದಾರೆ. 

ಯತಿಗೌರ್ ತನ್ನ ಸಂಚಾರದ ಸಮಯದಲ್ಲಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಕಥೆಗಳನ್ನು ಹಂಚಿಕೊಂಡಿದ್ದಾರೆ. ತಾವು ಪದವಿ ಪಡೆದ ಬಳಿಕ ಟ್ರಾವೆಲ್ ಕಂಪೆನಿಯಲ್ಲಿ ಕೆಲಸ ಮಾಡಿದ್ದಾರೆ. ಇದರಿಂದ ಟ್ರಾವೆಲ್ ಮಾಡಲು ಸಮಯ, ಹಣದ ಹೊಂದಾಣಿಕೆ ಹೇಗೆ ಮಾಡಬೇಕು ಎಂದು ಹೇಳುತ್ತಿರುತ್ತಾರೆ. ಅಲ್ಲದೆ, ಯತಿಯು ತನ್ನ ಮೊದಲ ಪ್ರಯಾಣ ಆರಂಭಿಸಿದಾಗ ತಮ್ಮ ತಂದೆ-ತಾಯಿಯೇ ಅರ್ಥಿಕ ಸಹಾಯ ಮಾಡಿದ್ದಾರೆ. ಬಳಿಕ ತನ್ನ ಸಾಮಾಜಿಕ ಮಾಧ್ಯಮಗಳ ಮೂಲಕ ಒಂದಿಷ್ಟು ಹಣ ಬರುತ್ತದೆ. ಅದರಿಂದಲೇ ನನ್ನ ದಿನ ನಿತ್ಯದ ಬದುಕು ಎಂದು ಹೇಳುತ್ತಾರೆ.

ಯತಿಯು ತನಗೆ ಮತ್ತು ಶ್ವಾನಕ್ಕೆ ಪ್ರತಿನಿತ್ಯದ ಊಟ, ವಸತಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಆದರೆ, ಇದು ಅಂದುಕೊಂಡಷ್ಟು ಸುಲಭ ಅಲ್ಲ. ದಾರಿಯಲ್ಲಿ ಯಾರು ನಮ್ಮನ್ನು ಸ್ವಾಗತಿಸಿ ಊಟ ಹಾಕಿ ಮಲಗಲು ಜಾಗ ಕೊಡುತ್ತಾರೆಯೇ ಅವರೇ ನಮ್ಮ ಬಂಧುಗಳು ಎಂದು ಯತಿ ಹೇಳುತ್ತಾರೆ. ಕೆಲಬಾರಿ ಮಠ, ಮಂದಿರ ಮತ್ತು ದೇವಸ್ಥಾನಗಳಲ್ಲಿ ಮಲಗಿ ಮರುದಿನ ಮತ್ತೊಂದು ಹೊಸ ಪ್ರಯಾಣಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಾರೆ. ತನ್ನ ಶ್ವಾನ ಕೂಡ ಯುತಿಯೊಂದಿಗೆ ಹಿಂಬಾಲಿಸುತ್ತದೆ.