BJP ಯಲ್ಲಿ ಕಾರ್ಯಕರ್ತ ಹುದ್ದೆ ಪರ್ಮನೆಂಟ್, ನಾನು ಅಧಿಕಾರಕ್ಕಾಗಿ ಇನ್ನೊಬ್ಬರನ್ನು ಮುಗಿಸಿಲ್ಲ:ನಳಿನ್ ಹೀಗಂದಿದ್ಯಾಕೆ?




ಮಂಗಳೂರು: ನನಗೆ ಅಧಿಕಾರ ಸಿಗಬೇಕೆಂದು ನಾನು ಇನ್ನೊಬ್ಬರನ್ನು ಮುಗಿಸಿಲ್ಲ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ನಾನೋರ್ವ ಕಾರ್ಯಕರ್ತನಾಗಿ ಬಂದವನು‌. ಎಲ್ಲಾ ಅಧಿಕಾರವೂ ಮಾಜಿಯಾಗುತ್ತದೆ‌. ಕಾರ್ಯಕರ್ತ ಮಾಜಿಯಾಗುವುದಿಲ್ಲ. ಪಕ್ಷ ಹೇಳಿದರೆ ನಾನು ಕಚೇರಿಯಲ್ಲಿ ಕಸ ಗುಡಿಸಲು ತಯಾರಿದ್ದೇನೆ. ಮೊದಲು ಮುಲ್ಕಿ-ಮೂಡುಬಿದಿರೆ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪಕ್ಷ ಹೇಳಿತ್ತು. ನಾನು ಸ್ಪರ್ಧಿಸೋಲ್ಲ ಅಂದಿದ್ದೆ‌. ಆ ಬಳಿಕ ಲೋಕಸಭಾ ಅಭ್ಯರ್ಥಿಯಾಗಲು ಸೂಚಿಸಿತ್ತು‌. ನಾನು ಸ್ಪರ್ಧಿಸೋಲ್ಲ ಎಂದು ಮೂರು ದಿನಗಳ ಕಾಲ ತಪ್ಪಿಸಿದ್ದೆ ಎಂದರು.




ನಾನು ಯಾವುದೇ ಅಧಿಕಾರವನ್ನು ಕೇಳಿ ಪಡೆದಿಲ್ಲ. ಯಾವ ಅಧಿಕಾರಕ್ಕೆ ಅರ್ಜಿ ಹಾಕಿಲ್ಲ. ಯಾರ ವಿರುದ್ಧವೂ ಮಾತನಾಡಿಲ್ಲ. ನನಗೆ ಅಧಿಕಾರ ಸಿಗಬೇಕೆಂದು ಇನ್ನೊಬ್ಬರನ್ನು ಮುಗಿಸಿಲ್ಲ. ಯಾರ ಬಗ್ಗೆಯೂ ಟೀಕೆ ಮಾಡಿಲ್ಲ. ಪಕ್ಷವೇ ಕರೆದು ನನಗೆ ಟಿಕೆಟ್ ನೀಡಿತ್ತು. ರಾಜ್ಯಾಧ್ಯಕ್ಷ ಸ್ಥಾನವನ್ನು ನಾನು ಕೇಳಿ ಪಡೆದದ್ದಲ್ಲ ಅಮಿತ್ ಶಾ ಅವರೇ ನನಗೆ ಕರೆದು ಅವಕಾಶ ಕೊಟ್ಟದ್ದು. ಈಗ ಪಕ್ಷ ಕಟ್ಟುವ ಜವಾಬ್ದಾರಿ ಕೊಟ್ಟಿದೆ. ಅದನ್ನು ಮಾಡುತ್ತಿದ್ದೇನೆ ಎಂದು ನಳಿನ್ ಕುಮಾರ್ ಕಟೀಲು ಹೇಳಿದರು‌.