ಬೆಂಗಳೂರು: ಗುತ್ತಿಗೆದಾರನಿಂದ ಲಂಚದ ಬೇಡಿಕೆ, ಜೀವ ಬೆದರಿಕೆ, ಜಾತಿ ನಿಂದನೆ, ಅತ್ಯಾಚಾರ ಸೇರಿದಂತೆ ಬಹಳಷ್ಟು ಪ್ರಕರಣಗಳಲ್ಲಿ ಸಿಲುಕಿಕೊಂಡಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಇದೀಗ ಅತ್ಯಾಚಾರ ಸಂತ್ರಸ್ತೆ ಗಂಭೀರ ಆರೋಪ ಮಾಡಿದ್ದಾರೆ. ಶಾಸಕ ಮುನಿರತ್ನ ವಿಧಾನಸೌಧ, ವಿಕಾಸಸೌಧ ಹಾಗೂ ಸರಕಾರಿ ವಾಹನದಲ್ಲೂ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಪೊಲೀಸರ ವಿಚಾರಣೆಯಲ್ಲಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆಂದು ವರದಿಯಾಗಿದೆ.
ಮುನಿರತ್ನ ಅತ್ಯಾಚಾರ ಪ್ರಕರಣ ಸಂಬಂಧ ಗುರುವಾರ ಪೊಲೀಸರು ಸಂತ್ರಸ್ತೆಯನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆಕೆ, ವಿಧಾನಸೌಧದೊಳಗೆ, ವಿಕಾಸಸೌಧದೊಳಗೆ ಸೇರಿದಂತೆ ಸರಕಾರಿ ವಾಹನದಲ್ಲೂ ಶಾಸಕ ಮುನಿರತ್ನ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೆ ದಾಖಲಿಸಿದ್ದಾರೆ.
ಈಗಾಗಲೇ ಅತ್ಯಾಚಾರ ಪ್ರಕರಣದಲ್ಲಿ ಬಂಧನದಲ್ಲಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಸಂತ್ರಸ್ತೆಯ ಅಚ್ಚರಿ ಹೇಳಿಕೆ ಮತ್ತಷ್ಟು ಸಂಕಷ್ಟ ತಂದೊಡ್ಡಿದಂತಾಗಿದೆ. ಅಲ್ಲದೆ, ರಾಜಕೀಯ ಹಾಗೂ ಸಾರ್ವಜನಿಕ ವಲಯವನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಕಗ್ಗಲಿಪುರ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.