ಮಂಗಳೂರು: ಅಳಿವೆಬಾಗಿಲು ಸಮುದ್ರತೀರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆ - ಕೊಲೆ ಶಂಕೆ


ಮಂಗಳೂರು: ನಗರದ ತೋಟ ಬೆಂಗ್ರೆ ಅಳಿವೆಬಾಗಿಲು ಸಮೀಪದ ಸಮುದ್ರತೀರದಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

ಬಾಗಲಕೋಟೆ ಜಿಲ್ಲೆಯ ಅಮೀನಗಡ ಮೂಲದ ಮುತ್ತು ಬಸವರಾಜ್‌ ವಡ್ಡರ್ ಆಲಿಯಾಸ್ ಮುದುಕಪ್ಪ ಮೃತಪಟ್ಟ ವ್ಯಕ್ತಿ ಎಂದು ತಿಳಿದು ಬಂದಿದೆ.

ಮಂಗಳೂರು ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಮುತ್ತು ಬಸವರಾಜ್‌ ಹಲವಾರು ವರ್ಷಗಳಿಂದ ತೋಟ ಬೆಂಗ್ರೆ ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಿದ್ದರು ಎನ್ನಲಾಗಿದೆ. ಇದೀಗ ಅವರು ಮೃತದೇಹವಾಗಿ ಪತ್ತೆಯಾಗಿದ್ದಾರೆ.

ಮೃತದೇಹದ ಬಲ ಕಾಲು, ಬಲ ಕೈ ಹಾಗೂ ಹಣೆಯ ಭಾಗದಲ್ಲಿ ರಕ್ತದ ಗಾಯವಿದೆ. ಮೇಲ್ನೋಟಕ್ಕೆ ಕೊಲೆ ಶಂಕೆ ವ್ಯಕ್ತವಾಗಿದೆ. ವಿಪರೀತ ಕುಡಿತದ ಚಟ ಹೊಂದಿರುವ ಇವರು ಯಾರೊಂದಿಗೋ ಜಗಳವಾಡಿ ಕೊಲೆಗೀಡಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಪಣಂಬೂರು ಪೊಲೀಸರು  ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.