ಮೂಡುಬಿದಿರೆ: ಆಳ್ವಾಸ್‌ನಲ್ಲಿ ಯುಪಿಎಸ್‌ಸಿ, ಕೆಪಿಎಸ್‌ಸಿ ಪರೀಕ್ಷೆಗಳಿಗೆ 9ತಿಂಗಳ ಸನಿವಾಸ ತರಬೇತಿ

ಮೂಡುಬಿದಿರೆ: ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದವಗೆ ಯುಪಿಎಸ್‌ಸಿ ಹಾಗೂ ಕೆಪಿಎಸ್‌ಸಿಯ ಪೂರ್ವಭಾವಿ (ಪ್ರಿಲಿಮ್ಸ್) ಹಾಗೂ ಮುಖ್ಯ ಪರೀಕ್ಷೆಗಳಿಗೆ (ಮೈನ್ಸ್) 9 ತಿಂಗಳ ನಿರಂತರ ಸನಿವಾಸ ತರಬೇತಿ ನೀಡಲು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮುಂದಾಗಿದೆ. ಈ ಸಂಬಂಧ ಬೆಂಗಳೂರಿನ ಸಾಧನಾ ಕೋಚಿಂಗ್ ಸೆಂಟ‌ರ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಎಲ್ಲರಿಗೂ ಕೈಗೆಟಕುವ ರೀತಿಯಲ್ಲಿ ಗುಣಮಟ್ಟದ ತರಬೇತಿಯನ್ನು ನೀಡಲಾಗುವುದು ಎಂದು ಅಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ತಿಳಿಸಿದ್ದಾರೆ.

ಸರ್ಕಾರಿ ಹಾಗೂ ಅರೆ ಸರ್ಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಿದ್ಧಗೊಳಿಸಲು ದ.ಕ.ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಈ ಪ್ರಯತ್ನಕ್ಕೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಹಾಗೂ ಸಾಧನಾ ತರಬೇತಿ ಅಕಾಡೆಮಿ ಮುಂದಾಗಿದೆ.

ಅಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಈಗಾಗಲೇ ಪ.ಪೂ. ಹಾಗೂ ಪದವಿ ವಿದ್ಯಾಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲಾಗುತ್ತಿದೆ. ಪ್ರಸ್ತುತ ವರ್ಷದಿಂದ ಪದವಿ ಪೂರ್ಣಗೊಳಿಸಿರುವವರಿಗೆ 9ತಿಂಗಳ ನಿರಂತರ ತರಬೇತಿ ಹಾಗೂ ದೈನಂದಿನ ಅಭ್ಯಾಸ ಚಟುವಟಿಕೆಗಳನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.

ನೋಂದಣಿ ಪ್ರಕ್ರಿಯೆ ಆರಂಭಗೊಂಡಿದ್ದು ಹೆಚ್ಚಿನ ಮಾಹಿತಿಗಾಗಿ ದೂ: 94801 05446, 72590 06116 ಸಂಪರ್ಕಿಸಬಹುದು ಎಂದು ತಿಳಿಸಿದರು.

ಸಾಧನಾ ಐಎಎಸ್ ತರಬೇತಿ ಕೇಂದ್ರದ ನಿರ್ದೇಶಕಿ ಜ್ಯೋತಿ, ಆಳ್ವಾಸ್‌ ಕಾಲೇಜಿನ ಪ್ರಾಂಶುಪಾಲ ಕುರಿಯನ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.