VIJAYAPURA: ವೈದ್ಯೆಯ ತಾಳಿ ದೋಚಿ ಪರಾರಿ- ಹಲ್ಲು ನೋವು ಚಿಕಿತ್ಸೆಗೆ ಬಂದವನ ಕೃತ್ಯ!



ವಿಜಯಪುರ: ರೋಗಿಯ ಸೋಗಿನಲ್ಲಿ ಆಸ್ಪತ್ರೆಗೆ ಬಂದಿದ್ದ ಕಳ್ಳನೊಬ್ಬ ವೈದ್ಯೆಯ ಕೊರಳಲ್ಲಿದ್ದ 11 ಗ್ರಾಂ ಚಿನ್ನದ ತಾಳಿಯನ್ನು ಕಿತ್ತುಕೊಂಡು ಪರಾರಿಯಾದ ಘಟನೆ ವಿಜಯಪುರದ ಕಾಳಿಕಾ ನಗರದಲ್ಲಿ ಹಾಡಹಗಲೇ ನಡೆದಿದೆ. 


ಲೇಡಿಸ್‌ ಹಾಸ್ಟೆಲ್ ಬಳಿಯಿರುವ ಪಾಟೀಲ ಕ್ಲಿನಿಕ್‌ನ ವೈದ್ಯೆ ಡಾ. ಸರೋಜಿನಿ ಪಾಟೀಲ ವಂಚನೆಗೊಳಗಾದವರು.


ಆರೋಪಿ ಮಂಕಿ ಕ್ಯಾಪ್ ಧರಿಸಿ ರೋಗಿ ವೇಷದಲ್ಲಿ ಆಸ್ಪತ್ರೆಗೆ ಬಂದಿದ್ದನು. ಹಲ್ಲು ನೋಯುತ್ತಿದೆ ಎಂದು ವೈದ್ಯರ ಬಳಿ ಇಂಗ್ಲಿಷ್‌ನಲ್ಲಿ ಮಾತಿಗಿಳಿದಿದ್ದಾನೆ. ಆಗ ವೈದ್ಯೆ ಆತನನ್ನು ಚೆಕ್ ಅಪ್ ಮಾಡಲು ಮುಂದಾಗುತ್ತಿದ್ದಂತೆಯೇ, ವೈದ್ಯೆ ಸರೋಜಿನಿ ಪಾಟೀಲ ಕೊರಳಲಿದ್ದ 11 ಗ್ರಾಂ ಚಿನ್ನದ ತಾಳಿ ಸರ ಎಗರಿಸಿ ಪರಾರಿಯಾಗಿದ್ದಾನೆ.

ಆಗ ವೈದ್ಯೆ ಕಿರುಚುತ್ತಲೇ ಹೊರಗೆ ಬಂದು ಖದೀಮನ ಬೆನ್ನು ಹತ್ತಿದರು. ಆದರೆ, ಆತ ಬೈಕ್ ಮೇಲೆ ತನ್ನ ಇನ್ನೊಬ್ಬ ಸಂಗಡಿಗನ ಜತೆಗೆ ಪರಾರಿಯಾಗಿದ್ದಾನೆ. ಈ ದೃಶ್ಯಗಳೆಲ್ಲ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ಆದರ್ಶನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.