ಪ್ರೇಯಸಿಯನ್ನು ವಿವಾಹವಾಗಲು ಪತ್ನಿ - ಮಕ್ಕಳನ್ನು ಕೊಂದು ಆ್ಯಕ್ಸಿಡೆಂಟ್ ನಾಟಕ : ಪೊಲೀಸ್ ತನಿಖೆಯಲ್ಲಿ ವೈದ್ಯನ ಕೃತ್ಯ ಬಯಲು
Wednesday, July 17, 2024
ಹೈದರಾಬಾದ್: ವೈದ್ಯನೋರ್ವನು ಪ್ರೇಯಸಿಯನ್ನು ವಿವಾಹವಾಗಲು ತನ್ನ ಪತ್ನಿ ಹಾಗೂ ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಲೆಗೈದು ಅಪಘಾತವೆಂದು ಬಿಂಬಿಸಲು ಹೋಗಿ ಪೊಲೀಸರ ಅತಿಥಿಯಾಗಿರುವ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದೆ.
ಕುಮಾರಿ (29), ಕೃಷಿಕಾ (5) ಮತ್ತು ಕೃತಿಕಾ (3) ಮೃತಪಟ್ಟ ದುರ್ದೈವಿಗಳು. ಆರೋಪಿ ಬೋಡಾ ಪ್ರವೀಣ್‌ನನ್ನು (32) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೋಡಾ ಪ್ರವೀಣ್ ವೃತ್ತಿಯಲ್ಲಿ ಫಿಸಿಯೋಥೆರಪಿಸ್ಟ್. ಈತ ಹೈಡೋಸೇಜ್ ಇರುವ ಔಷಧಿಯನ್ನು ನೀಡಿ ಪತ್ನಿ ಮಕ್ಕಳನ್ನು ಕೊಂದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಮೇ 28ರಂದು ಬೋಡಾ ಪ್ರವೀಣ್ ತನ್ನ ಪತ್ನಿ ಮಕ್ಕಳೊಂದಿಗೆ ತಮ್ಮ ತವರೂರು ಖಮ್ಮಂಗೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯಿರುವ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಹಾಗೂ ಇಬ್ಬರು ಪುತ್ರಿಯರು ಮೃತಪಟ್ಟಿದ್ದಾಗಿ ಆರೋಪಿ ಪೊಲೀಸರ ಪೊಲೀಸ್ ದೂರು ನೀಡಿದ್ದ.
ಆರೋಪಿ ಹೇಳಿಕೆಯನ್ನು ಆಧರಿಸಿ ಅಪಘಾತ ನಡೆದ ಸ್ಥಳವನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆಗ ಆತನ ಮೇಲೆ ಸಂಶಯ ಮೂಡಲು ಶುರುವಾಯಿತು. ಇದಲ್ಲದೆ ಅಪಘಾತವಾದಾಗ ಮೈಯಲ್ಲಿರುವ ಮೂಳೆಗಳು ಮುರಿಯಬೇಕಿತ್ತು. ರಕ್ತ ಬಂದು ಗಾಯಗಳಾಗಬೇಕಿತ್ತು. ಆದರೆ ಇದು ಯಾವುದು ಆಗಿಲ್ಲ. ಹೀಗಾಗಿ ಇಡೀ ಕಾರನ್ನು ಪೊಲೀಸರು ಹುಡುಕಿದಾಗ ಅದರಲ್ಲಿ ಖಾಲಿ ಇರುವ ಸಿರಂಜ್ ಸಿಕ್ಕಿದೆ. ಇದರ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ನಿಜ ಒಪ್ಪಿಕೊಂಡಿದ್ದಾನೆ.
ತನ್ನ ಪತ್ನಿಗೆ ತಾನು ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಚಾರ ತಿಳಿದಿದ್ದರಿಂದ ತನ್ನ ಪ್ರೇಯಸಿಯನ್ನು ಮೆಚ್ಚಿಸಲು ಹೈಡೋಸೇಜ್ ಇರುವ ಔಷಧಿ ನೀಡಿ ಪತ್ನಿ ಹಾಗೂ ಉಸಿರುಗಟ್ಟಿಸಿ ಮಕ್ಕಳನ್ನು ಕೊಂದಿದ್ದಾಗಿ ವಿಚಾರಣೆ ವೇಳೆ ಹೇಳಿದ್ದಾನೆ. ವಿಚಾರಣೆ ನಡೆಯುತ್ತಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಲಾಗುವುದು ಎಂದು ACP ಎಸ್.ವಿ. ರಮಣಮೂರ್ತಿ ತಿಳಿಸಿದ್ದಾರೆ.