ಉಳ್ಳಾಲ: ಟಿಪ್ಪರ್‌ - ಸ್ಕೂಟರ್ ಅಪಘಾತ ; ಕೊನೆಗೂ ಗಾಯಾಳು ಸ್ಕೂಟರ್‌ ಸವಾರನ ಉಳಿಸಲು ಸ್ನೇಹಿತರು ಮಾಡಿದ ಪ್ರಯತ್ನ ವಿಫಲ



ಉಳ್ಳಾಲ: ಟಿಪ್ಪರ್‌ ಹಾಗೂ ಸ್ಕೂಟರ್‌ ನಡುವೆ ಸಂಭವಿಸಿರುವ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟರ್ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆತನನ್ನು ಉಳಿಸಲು ಸೇಹಿತರು ಮಾಡಿರುವ ಪ್ರಯತ್ನ ಕೊನೆಗೂ ವಿಫಲಗೊಂಡಿದೆ.

ಪಾವೂರು ಮಲಾರು ಅಕ್ಷರನಗರ ನಿವಾಸಿ ಗಣೇಶ್‌  ಆಚಾರ್ಯ (27) ಮೃತಪಟ್ಟ ಯುವಕ. 

ಜೂ.28ರಂದು ಬೆಳಗ್ಗೆ 11.50ರ ಸುಮಾರಿಗೆ ಗಣೇಶ್ ಪಾವೂರು ಹರೇಕಳದಿಂದ ಕೊಣಾಜೆ ಕಡೆಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಅವರು ಹರೇಕಳ ಗ್ರಾಪಂ ತಲುಪುತ್ತಿದ್ದಂತೆ ಮುಂಭಾಗದಲ್ಲಿ ಸಂಚರಿಸುತ್ತಿದ್ದ ಟಿಪ್ಪರ್‌ ಓವರ್ ಟೇಕ್ ಮಾಡುವ ಭರದಲ್ಲಿ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ ಗಣೇಶ್ ಆಚಾರ್ಯ ಸ್ಕೂಟರ್‌ ಸಹಿತ ರಸ್ತೆಗೆಸೆಯಲ್ಪಟ್ಟಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ನಾಟೆಕಲ್‌ ಕಣಚೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಅಡ್ಯಾರ್‌ ಫಸ್ಟ್‌ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಮಂಗಳೂರಿನಲ್ಲಿ ಎ.ಸಿ ಮೆಕ್ಯಾನಿಕ್‌ ಆಗಿದ್ದ ಗಣೇಶ್‌ ಆಚಾರ್ಯ ಮನೆಯ ಹಿರಿಯ ಪುತ್ರನಾಗಿದ್ದು, ಜೀವನಾಧಾರವಾಗಿದ್ದರು. ಮೃತರು ತಾಯಿ, ತಂದೆ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ. ಟಿಪ್ಪರ್‌ ಲಾರಿ ಚಾಲಕ ಮಹಮ್ಮದ್‌ ಹನೀಫ್‌ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ಗಣೇಶ್‌ ಆಚಾರ್ಯ  ಶಸ್ತ್ರಚಿಕಿತ್ಸೆಗೆ 10 ಲಕ್ಷ ರೂ. ಖರ್ಚಾಗುವುದರಿಂದ ಸ್ನೇಹಿತರು ವಾಟ್ಸ್ಆ್ಯಪ್‌ ಮೂಲಕ ದಾನಿಗಳ ಸಹಕಾರವನ್ನು ಕೋರಿದ್ದರು. ಆದರೆ ಫಸ್ಟ್‌ ನ್ಯೂರೋ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಮಂಗಳವಾರ ಮೃತಪಟ್ಟಿದ್ದಾರೆ‌. ಕಡೆಗೂ ಗಣೇಶ್ ಆಚಾರ್ಯ ಬದುಕಿ ಬರಲು ಸಹಕರಿಸಿದ ಹಿತೈಷಿಗಳ,ಸಂಬಂಧಿಕರ, ಸ್ನೇಹಿತರ ಪ್ರಾರ್ಥನೆ ಕೊನೆಗೂ ಈಡೇರಲಿಲ್ಲ.