ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ: ಶಂಕಿತ ಶೂಟರ್​ ಹತ್ಯೆ - Attack on Donald Trump

 





ಚಿಕಾಗೋ: ಪೆನ್ಸಿಲ್ವೇನಿಯಾದಲ್ಲಿ ನಡೆಯುತ್ತಿದ್ದ ಚುನಾವಣಾ ರ‍್ಯಾಲಿ ವೇಳೆ ಅಮೆರಿಕದ ಮಾಜಿ ಅಧ್ಯಕ್ಷ ಮತ್ತು ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಟ್ರಂಪ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡಿನ ದಾಳಿಯಲ್ಲಿ ಟ್ರಂಪ್ ಕಿವಿಗೆ ಗಾಯವಾಗಿದೆ. ಅಮೆರಿಕ ಭದ್ರತಾ ಪಡೆಗಳು ಘಟನಾ ಸ್ಥಳದಲ್ಲಿ ಶಂಕಿತ ಶೂಟರ್​ನನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಟ್ರಂಪ್ ಚುನಾವಣಾ ಪ್ರಚಾರ ನಡೆಸುತ್ತಿದ್ದ ವೇಳೆ ದಾಳಿಕೋರ ಗುಂಡು ಹಾರಿಸಿದ್ದಾನೆ. ಈ ಸಮಯದಲ್ಲಿ ಟ್ರಂಪ್​ ವೇದಿಕೆಯ ಮೇಲೆ ಕುಸಿದು ಬಿದ್ದಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣವೇ ಟ್ರಂಪ್ ಅವರನ್ನು ಸುತ್ತುವರೆದರು. ಮಾಜಿ ಅಧ್ಯಕ್ಷರನ್ನು ವೇದಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ಟ್ರಂಪ್ ಸುರಕ್ಷಿತವಾಗಿದ್ದಾರೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ವರದಿಯಾಗಿದೆ.


ಟ್ರಂಪ್​ ಮೇಲಿನ ದಾಳಿ ಖಂಡಿಸಿದ ಬೈಡನ್: ಟ್ರಂಪ್ ಮೇಲಿನ ನಡೆದ ಗುಂಡಿ ದಾಳಿಯನ್ನು ಅಧ್ಯಕ್ಷ ಜೋ ಬೈಡನ್ ಅವರು ತೀವ್ರವಾಗಿ ಖಂಡಿಸಿದ್ದಾರೆ. ''ಗುಂಡಿನ ದಾಳಿ ಬಗ್ಗೆ ಭದ್ರತಾ ಏಜೆನ್ಸಿಗಳಿಂದ ವಿವರಣೆ ಕೇಳಲಾಗಿದೆ. ಅಮೆರಿಕದಲ್ಲಿ ಯಾವುದೇ  ಹಿಂಸಾಚಾರಕ್ಕೆ ಅವಕಾಶವಿಲ್ಲ'' ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.