ದಿನಕ್ಕೆ ಒಂದೇ ಗಂಟೆ ತಯಾರಿ ನಡೆಸಿ 34ಲಕ್ಷ ರೂ. ಸಂಬಳದ ಉದ್ಯೋಗ ಪಡೆದ ಯುವತಿ
Saturday, July 20, 2024
ಹೈದರಾಬಾದ್: ಇಂದು ಉತ್ತಮ ಸಂಬಳದ ಕೆಲಸ ಗಟ್ಟಿಸಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಅದಕ್ಕೆ ಸಾಕಷ್ಟು ಶ್ರಮವಹಿಸಬೇಕಾಗುತ್ತದೆ. ಕೆಲವರು ದಿನವಿಡಿ ಓದಿದರೂ ಯಶಸ್ಸು ಅವರ ಕೈಹಿಡಿಯುವುದಿಲ್ಲ. ಆದರೆ, ಇಲ್ಲೊಬ್ಬ ಯುವತಿ ದಿನಕ್ಕೆ 1ಗಂಟೆ ತಯಾರಿ ನಡೆಸಿ, ವಾರ್ಷಿಕವಾಗಿ ಬರೋಬ್ಬರಿ 34 ಲಕ್ಷ ರೂ. ಸಂಬಳದ ಉದ್ಯೋಗ ಪಡೆದುಕೊಂಡಿದ್ದಾಳೆ.
ಹೌದು... ಇದು ಹುಜೂರಾಬಾದ್ ಮೂಲದ ಕೃಷ್ಣವೇಣಿ ಎಂಬ ಯುವತಿಯ ಯಶೋಗಾಥೆ. ಯಾವುದೇ ಕೋಚಿಂಗ್ ಇಲ್ಲದೆ ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಓದಿ ಕೆಲಸ ಗಿಟ್ಟಿಸಿಕೊಂಡು ತನ್ನ ಕನಸನ್ನು ನನಸು ಮಾಡಿಕೊಂಡಿರುವ ಈಕೆ ಇಂದು ಎಲ್ಲರಿಗೆ ಮಾದರಿಯಾಗಿದ್ದಾಳೆ. ಕೃಷ್ಣವೇಣಿ ದಿನಕ್ಕೆ ಒಂದು ಗಂಟೆ ಮಾತ್ರ ತಯಾರಿ ನಡೆಸುತ್ತಿದ್ದಳು.
ಯಶಸ್ಸು ಎಂಬುದು ಸುಲಭವಾಗಿ ಬರುವುದಿಲ್ಲ ಎಂದು ಕೃಷ್ಣವೇಣಿ ಹೇಳುತ್ತಾರೆ. ನನ್ನ ತಂದೆ ಖಾಸಗಿ ಚಿಟ್ ಫಂಡ್ ಕಂಪನಿಯ ಉದ್ಯೋಗಿ ಮತ್ತು ನನ್ನ ಸಹೋದರಿ ಮೆಡಿಸಿನ್ ಓದುತ್ತಿದ್ದಾರೆ. ನಮ್ಮ ಜೀವನದಲ್ಲಿ ಬಾಡಿಗೆ ಕಟ್ಟಲಾಗದ ಪರಿಸ್ಥಿತಿಯನ್ನು ನಾವು ಎದುರಿಸಿದ್ದೇವೆ. ನನ್ನ ಓದು ಇಂದು ಎಲ್ಲ ಕಷ್ಟಗಳಿಗೆ ಕೊನೆಯಾಡಿದೆ. ಕೋಡಿಂಗ್ ಮೇಲಿನ ನನ್ನ ಹಿಡಿತವನ್ನು ಸುಧಾರಿಸಿಕೊಂಡು ವೃತ್ತಿ ಬದುಕಿನಲ್ಲಿ ವಿಜೇತಳಾಗಿದ್ದೇನೆ ಎಂದು ಕೃಷ್ಣವೇಣಿ ಹೇಳಿದ್ದಾರೆ.
ನನ್ನ ಕೌಶಲಗಳನ್ನು ಸುಧಾರಿಸಲು ಮಾತ್ರ ನಾನು ಫೋಟೋ ಮತ್ತು ಲ್ಯಾಪ್‌ಟಾಪ್‌ಗಳನ್ನು ಬಳಸಿದ್ದೇನೆ. ಕ್ಯಾಂಪಸ್ ಸಂದರ್ಶನದ ವೇಳೆ ಪೇಪಾಲ್ ಕಂಪನಿಯಲ್ಲಿ 34 ಲಕ್ಷ ರೂ. ಸಂಬಳದ ಕೆಲಸ ಗಿಟ್ಟಿಸಿದ್ದೇನೆ. ನಿಮಗೆ ಇಷ್ಟವಾಗುವುದರ ಮೇಲೆ ನೀವು ಶ್ರಮವಹಿಸಿದಾಗ ಖಂಡಿತವಾಗಿಯೂ ಯಶಸ್ಸು ಸಾಧಿಸುತ್ತೀರಿ ಎಂದು ಕೃಷ್ಣವೇಣಿ ತಮ್ಮ ಸಾಧನೆ ಹಿಂದಿನ ಗುಟ್ಟನ್ನು ರಟ್ಟು ಮಾಡಿದರು.