ಮಂಗಳೂರು: 300 ಕೋಟಿ ದರೋಡೆಗೆ 7 ತಿಂಗಳಿನಿಂದ ಸ್ಕೆಚ್- 9ಲಕ್ಷ ದರೋಡೆಗೈದ ಗ್ರಾಪಂ ಸದಸ್ಯ ಸೇರಿದಂತೆ ಹತ್ತು ಮಂದಿ ದರೋಡೆಕೋರರು ಅರೆಸ್ಟ್
Thursday, July 4, 2024
ಮಂಗಳೂರು: ನಗರದ ಹೊರವಲಯದ ಪೆರ್ಮಂಕಿ ಪಿಡಬ್ಲ್ಯುಡಿ ಕಂಟ್ರಾಕ್ಟರ್ ಮನೆ ದರೋಡೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಪ್ರಕರಣದಲ್ಲಿ ಭಾಗಿಯಾದ 10 ಮಂದಿ ದರೋಡೆಕೋರರನ್ನು ಕಂಬಿ ಹಿಂದೆ ಕಳುಹಿಸಿದ್ದಾರೆ.
ನೀರುಮಾರ್ಗ ನಿವಾಸಿ, ನೀರುಮಾರ್ಗ ಗ್ರಾಪಂ ಸದಸ್ಯ ವಸಂತ ಕುಮಾರ್(42), ನೀರುಮಾರ್ಗ ನಿವಾಸಿ ರಮೇಶ ಪೂಜಾರಿ (42), ಬಂಟ್ವಾಳದ ಅಡ್ಯನಡ್ಕ ನಿವಾಸಿ ರೈಮಂಡ್ ಡಿಸೋಜ(47), ಕಾಸರಗೋಡಿನ ಉಪ್ಪಳ ನಿವಾಸಿ ಬಾಲಕೃಷ್ಣ ಶೆಟ್ಟಿ(48) ಕೇರಳದ ತ್ರಿಶ್ಶೂರ್ ನಿವಾಸಿ ಜಾಕೀರ್ ಯಾನೆ ಶಾಕೀರ್ ಹುಸೈನ್(56), ವಿನೋಜ್ ಪಿ.ಕೆ., ತಿರುವನಂರಪುರಂ ನಿವಾಸಿ ಬಿಜು.ಜಿ. (41), ಸತೀಶ್ ಬಾಬು (44), ಶಿಜೋ ದೇವಸ್ಸಿ (38) ಬಂಧಿತ ದರೋಡೆಕೋರರು.
ಜೂನ್ 21ರಂದು ಸಂಜೆ 7-45ರ ಸುಮಾರಿಗೆ ಉಳಾಯಿಬೆಟ್ಟು ಪೆರ್ಮಂಕಿ ನಿವಾಸಿ ಪದ್ಮನಾಭ ಕೋಟ್ಯಾನ್ ಮನೆಗೆ ಏಕಾಏಕಿ ಸುಮಾರು 10-12 ಮಂದಿ ನುಗ್ಗಿದ್ದಾರೆ. ಚೂರಿಯಿಂದ ಪದ್ಮನಾಭ ಕೋಟ್ಯಾನ್‌ಗೆ ಹಲ್ಲೆ ಮಾಡಿದ ತಂಡ ಅವರ ಪತ್ನಿ ಹಾಗೂ ಪುತ್ರನನ್ನು ಕಟ್ಟಿ ಹಾಕಿ ನಗದು ಸೇರಿದಂತೆ 9ಲಕ್ಷ ಮೌಲ್ಯದ ಸೊತ್ತುಗಳನ್ನು ದರೋಡೆಗೈದಿದೆ. ಈ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದರೋಡೆ ಪ್ರಕರಣವನ್ನು ಬೇಧಿಸಲು ನಗರ ಅಪರಾಧ ವಿಭಾಗ(ಸಿಸಿಬಿ), ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಹಾಗೂ ದಕ್ಷಿಣ ಉಪವಿಭಾಗದ ಎಸಿಪಿಯವರ ವಿಶೇಷ ತಂಡಗಳನ್ನು ರಚಿಸಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು. ಮೊದಲಿಗೆ ತಂಡ ಘಟನೆ ನಡೆದ ಮನೆಯಲ್ಲಿ ದೊರೆತ ಸಿಸಿ ಕ್ಯಾಮೆರಾ ಪೂಟೇಜ್ ಸೇರಿದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ವಿವಿಧ ಸಿಸಿ ಕ್ಯಾಮರಾಗಳ ಆಧಾರದಲ್ಲಿ ತನಿಖೆ ಕೈಗೊಳ್ಳಲಾಗಿತ್ತು. ಈ ವೇಳೆ ದರೋಡೆ ನಡೆದ ಮನೆಯೊಡೆಯನ ಬಗ್ಗೆ ಹತ್ತಿರದಿಂದ ಬಲ್ಲವರು, ಅವರ ಜೊತೆಯಲ್ಲಿಯೇ ಕೆಲಸ ಮಾಡುವವರ ಕೈವಾಡವಿರುವುದು ಹಾಗೂ ಹೊರರಾಜ್ಯದ ವ್ಯಕ್ತಿಗಳ ಕೈವಾಡವಿರುವುದು ತಿಳಿದುಬಂದಿದೆ.
ಆದ್ದರಿಂದ ಮನೆಯೊಡೆಯ ಪದ್ಮನಾಭ ಕೋಟ್ಯಾನ್ ಅವರೊಂದಿಗೆ ಕೆಲಸ ಮಾಡುವ ವಸಂತ ಪೂಜಾರಿ ಹಾಗೂ ಅವರ ಪರಿಚಿತ ರಮೇಶ ಪೂಜಾರಿ, ರೈಮಂಡ್ ಡಿಸೋಜ, ಬಾಲಕೃಷ್ಣ ಶೆಟ್ಟಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಪದ್ಮನಾಭ ಕೋಟ್ಯಾನ್ ಮನೆಯಲ್ಲಿ ಕೋಟಿಗಟ್ಟಲೆ ಹಣವಿದೆ ಎಂದು ಅವರೊಂದಿಗೆ ಲಾರಿ ಚಾಲಕನಾಗಿದ್ದ ವಸಂತ ಕುಮಾರ್ ಇನ್ನೋರ್ವ ಆರೋಪಿ ರಮೇಶ್ ಪೂಜಾರಿಗೆ ಹೇಳಿದ್ದ. ಬಳಿಕ ರಮೇಶ್ ಪೂಜಾರಿ, ರೈಮಂಡ್ ಡಿಸೋಜ, ಬಾಲಕೃಷ್ಣ ಶೆಟ್ಟಿಗೆ ಉದ್ಯಮಿಯ ಮನೆಯ ಹಾಗೂ ವ್ಯವಹಾರದ ಮಾಹಿತಿ ನೀಡಿದಂತೆ ಬಾಲಕೃಷ್ಣ ಶೆಟ್ಟಿಯು ತನ್ನ ಸ್ನೇಹಿತ ಕೇರಳದ ವ್ಯಕ್ತಿಯೊಂದಿಗೆ ದರೋಡೆಗೆ ಸಂಚು ರೂಪಿಸಿದ್ದಾನೆ. ಪದ್ಮನಾಭ ಕೋಟ್ಯಾನ್ ಬಳಿ ಕೋಟ್ಯಾಂತರ ಹಣ ಇದ್ದು, ಅದನ್ನು ಮಾಸ್ಟರ್ ಬೆಡ್ ರೂಮ್ ಟೈಲ್ಸ್ ನೊಳಗೆ ಬಚ್ಚಿಡಲಾಗಿದೆ ಎಂದು ವಸಂತ ಕುಮಾರ್ ಉಳಿದ ಆರೋಪಿಗಳಲ್ಲಿ ಹೇಳಿದ್ದ.
ಆದ್ದರಿಂದ ಇವರು ಕೇರಳದ ಆರೋಪಿಗಳಿಗೆ ಮಾಹಿತಿ ನೀಡುವಾಗ ಸುಮಾರು 300 ಕೋಟಿ ಹಣ ಇರಬಹುದೆಂದು ತಿಳಿಸಿದ್ದಾರೆ. ಆದ್ದರಿಂದ 300 ಕೋಟಿ ಹಣ ದರೋಡೆಗೆ ಏಳು ತಿಂಗಳಿಂದ ಸ್ಕೆಚ್ ಹಾಕಲಾಗಿತ್ತು. ದರೋಡೆ ಮಾಡಿದ ಹಣವನ್ನು ಕೊಂಡೊಯ್ಯೊಲು ಆರೋಪಿಗಳು ಏಳೆಂಟು ಚೀಲಗಳನ್ನು ತಂದಿದ್ದರು.
ಕೇರಳದ ಆರೋಪಿಗಳನ್ನು ಪತ್ತೆಹಚ್ಚಲು 2ತಂಡಗಳು ಕೇರಳಕ್ಕೆ ತೆರಳಿ ಈ ದರೋಡೆ ಕೃತ್ಯದಲ್ಲಿ ಭಾಗಿಯಾಗಿರುವ ಬಂಧಿಸಲಾಗಿದೆ. ಈ ದರೋಡೆ ಕೃತ್ಯದಲ್ಲಿ ಒಟ್ಟು 15ಕ್ಕೂ ಅಧಿಕ ಆರೋಪಿಗಳು ಭಾಗಿಯಾಗಿರುವುದು ತನಿಖೆಯಿಂದ ಕಂಡುಬಂದಿರುತ್ತದೆ.