ಮದುವೆಯ ನಂತರ ಸೋನಾಕ್ಷಿ ಸಿನ್ಹಾ ಇಸ್ಲಾಂಗೆ ಮತಾಂತರ? ವರನ ತಂದೆಯ ಪ್ರತಿಕ್ರಿಯೆ ಹೀಗಿದೆ - Sonakshi Sinha





ಬಾಲಿವುಡ್​​ ನಟಿ ಸೋನಾಕ್ಷಿ ಸಿನ್ಹಾ ಮತ್ತು ನಟ ಜಹೀರ್ ಇಕ್ಬಾಲ್ ಇಂದು ವಿವಾಹವಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿದ್ಧತೆಗಳು ಪೂರ್ಣಗೊಂಡಿದ್ದು ಕಾರ್ಯಕ್ರಮದ ಕೆಲವು ವಿಡಿಯೋಗಳು ಆನ್​ಲೈನ್​ನಲ್ಲಿ ಹರಿದಾಡುತ್ತಿವೆ.

ಪ್ರೀ ವೆಡ್ಡಿಂಗ್​​​ ಸೆಲೆಬ್ರೇಶನ್​ನ ಗ್ಲಿಂಪ್ಸ್​​ ವೈರಲ್​ ಆಗಿದೆ. ವರನ ತಂದೆ ಇಕ್ಬಾಲ್ ರತಾನ್ಸಿ ಈ ಮದುವೆಯನ್ನು 'ಸಿವಿಲ್​​ ಸೆರಮನಿ' ಎಂದು ಕರೆದಿದ್ದಾರೆ. 


ಇದೇ ಸಂದರ್ಭದಲ್ಲಿ ಸೋನಾಕ್ಷಿ ಇಸ್ಲಾಂಗೆ ಮತಾಂತರಗೊಳ್ಳುವ ವದಂತಿಗಳನ್ನು ಅವರು ತಳ್ಳಿ ಹಾಕಿದ್ದಾರೆ. ವೆಬ್ಲಾಯ್ಡ್‌ನೊಂದಿಗೆ ಮಾತನಾಡಿದ ಅವರು, "ಇದು ಸಿವಿಲ್​ ಮ್ಯಾರೇಜ್​. ಯಾವುದೇ ಹಿಂದೂ ಅಥವಾ ಮುಸ್ಲಿಂ ಆಚರಣೆಗಳಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ. ಇನ್ನು, ಸೋನಾಕ್ಷಿ ಮದುವೆಯ ಬಳಿಕ ಇಸ್ಲಾಂಗೆ ಮತಾಂತರಗೊಳ್ಳುವ ಊಹಾಪೋಹಗಳಿಗೂ ಫುಲ್​ ಸ್ಟಾಪ್​ ಇಟ್ಟಿದ್ದಾರೆ. "ಸೋನಾಕ್ಷಿ ಮತಾಂತರವಾಗುತ್ತಿಲ್ಲ, ಇದು ಖಚಿತ. ಅವರ ಬಾಂಧವ್ಯ ಹೃದಯಗಳ ಸೇರುವಿಕೆ. ಇಲ್ಲಿ ಧರ್ಮಗಳ ಪಾತ್ರವಿಲ್ಲ" ಎಂದು ಹೇಳಿದರು.


"ಎಲ್ಲಕ್ಕಿಂತ ಹೆಚ್ಚಾಗಿ ನಾವೆಲ್ಲರೂ ಮನುಷ್ಯರು. ನಾನು ಮಾನವೀಯತೆಯ ಮೇಲೆ ನಂಬಿಕೆ ಇಟ್ಟವ. ದೇವರನ್ನು ಹಿಂದೂಗಳು ಭಗವಾನ್ ಮತ್ತು ಮುಸ್ಲಿಮರು ಅಲ್ಲಾ ಎಂದು ಕರೆಯುತ್ತಾರೆ. ಹಾಗಾಗಿ, ಇಬ್ಬರಿಗೂ ನನ್ನ ಆಶೀರ್ವಾದವಿದೆ" ಎಂದು ಅವರು ಹೇಳಿದರು.

ಇಂದು ನಡೆಯುವ ವಿವಾಹ ಸಮಾರಂಭದಲ್ಲಿ ಕೇವಲ ಕುಟುಂಬಸ್ಥರು ಮತ್ತು ಆಪ್ತರಿಗೆ ಸೀಮಿತವಾಗಿರಲಿದೆ.  ವಿಶೇಷ ವಿವಾಹ ಕಾಯ್ದೆ 1954ರ ಅಡಿಯಲ್ಲಿ ಸೋನಾಕ್ಷಿ ಮತ್ತು ಜಹೀರ್ ಇಕ್ಬಾಲ್ ವಿವಾಹ ರಿಜಿಸ್ಟ್ರಾರ್‌ಗೆ ಒಂದು ತಿಂಗಳು ನೋಟಿಸ್ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.


ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿರುವ ಇಕ್ಬಾಲ್ ರತಾನ್ಸಿ ನಿವಾಸದಲ್ಲಿ ವಿವಾಹ ನಡೆಯಲಿದೆ. ನೂತನ ಜೋಡಿಯ ಸ್ನೇಹಿತ ಜಾಫರ್ ಅಲಿ ಮುನ್ಷಿ ಎಂಬವರು ತಮ್ಮ ಇನ್​​ಸ್ಟಾಗ್ರಾಮ್ ಖಾತೆಯಲ್ಲಿ ಮೆಹೆಂದಿ ಸಮಾರಂಭದ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.