ಅಪ್ರಾಪ್ತ ಮಗಳೊಂದಿಗೆ ಮದುವೆಗೆ ಒತ್ತಾಯ, ಅಣ್ಣ - ತಮ್ಮನ ಹತ್ಯೆ ಮಾಡಿದ ಬಾಲಕಿಯ ತಂದೆ - Double Murder
ಬೆಳಗಾವಿ: ಅಪ್ರಾಪ್ತ ಮಗಳ ಜೊತೆ ವಿವಾಹ ಮಾಡಿಕೊಡುವಂತೆ ಒತ್ತಾಯಿಸುತ್ತಿದ್ದ ಯುವಕ ಹಾಗೂ ಜಗಳ ಬಿಡಿಸಲು ಬಂದ ಆತನ ಸಹೋದರನನ್ನು ಚಾಕುವಿನಿಂದ ಇರಿದು ಬಾಲಕಿಯ ತಂದೆಯೇ ಕೊಲೆ ಮಾಡಿರುವ ಘಟನೆ ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಕಾರಿಮನಿ ಗ್ರಾಮದ ಯಲ್ಲಪ್ಪ ಸೋಮಪ್ಪ ಅಳಗೋಡಿ (22) ಹಾಗೂ ಮಾಯಪ್ಪ ಸೋಮಪ್ಪ ಅಳಗೋಡಿ (20) ಹತ್ಯೆಯಾದ ಸಹೋದರರು. ಸವದತ್ತಿ ತಾಲೂಕಿನ ದುಂಡನಕೊಪ್ಪ ಗ್ರಾಮದ ಫಕೀರಪ್ಪ ಭಾಂವಿಹಾಳ (50) ಹತ್ಯೆ ಮಾಡಿರುವ ಆರೋಪಿ.
ಇಬ್ಬರಿಗೂ ಚಾಕು ಇರಿತ: ಆರೋಪಿ ಫಕೀರಪ್ಪನ ಅಪ್ರಾಪ್ತ ಪುತ್ರಿಯನ್ನು ಪ್ರೀತಿಸುವಂತೆ ಮಾಯಪ್ಪ ಹಳೇಗೋಡಿ ಪದೇ ಪದೆ ಪೀಡಿಸುತ್ತಿದ್ದನು. ಈ ವಿಷಯ ತಿಳಿದು ಪುತ್ರಿಯ ತಂಟೆಗೆ ಬರಬೇಡ ಎಂದು ಆತನಿಗೆ ಎಷ್ಟೇ ಬುದ್ಧಿವಾದ ಹೇಳಿದರೂ ಮಾತ್ರ ಸುಮ್ಮನಾಗದೇ, ತನ್ನ ಹಳೆ ಚಾಳಿಯನ್ನು ಮುಂದುವರೆಸಿದ್ದ. ಇದರಿಂದ ಆಕ್ರೋಶಗೊಂಡ ಫಕೀರಪ್ಪ, ಮಾಯಪ್ಪನಿಗೆ ಚಾಕುವಿನಿಂದ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದೇ ವೇಳೆ, ಜಗಳ ಬಿಡಿಸಲು ಬಂದ ಯಲ್ಲಪ್ಪನಿಗೂ ಚಾಕುವಿನಿಂದ ಫಕೀರಪ್ಪ ಇರಿದು ಪರಾರಿಯಾಗಿದ್ದನು. ಸಾವು ಬದುಕಿನ ಮಧ್ಯ ಹೋರಾಡುತ್ತಿದ್ದ ಯಲ್ಲಪ್ಪನನ್ನು ಕೂಡಲೇ ಗ್ರಾಮಸ್ಥರು ಮತ್ತು ಪೊಲೀಸರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಬುಧವಾರ ಯಲ್ಲಪ್ಪ ಕೂಡ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳಕ್ಕೆ ರಾಮದುರ್ಗ ಡಿವೈಎಸ್‌ಪಿ ಹಾಗೂ ಮುರಗೋಡ ಠಾಣೆಯ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಇಂದು ಆರೋಪಿ ಫಕೀರಪ್ಪ ಭಾಂವಿಹಾಳನನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ಮುರಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ ಗುಳೇದ ''ಆರೋಪಿಯ ಅಪ್ರಾಪ್ತ ಪುತ್ರಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಅವರ ಮನೆಗೆ ಹೋಗಿ ಕೊಲೆಯಾದ ಮಾಯಪ್ಪ ಗಲಾಟೆ ಮಾಡಿದ್ದ. ಅಲ್ಲದೇ ಆತನಿಗೆ ಎಷ್ಟೆ ಹೇಳಿದರೂ ಮಗಳಿಗೆ ತೊಂದರೆ ಕೊಡುವುದನ್ನು ನಿಲ್ಲಿಸಿರಲಿಲ್ಲ. ಹಾಗಾಗಿ, ನಿನ್ನೆ ಅಣ್ಣಾ, ತಮ್ಮನ ಮೇಲೆ ಹಲ್ಲೆ ಮಾಡಿದ್ದಾನೆ. ಆರೋಪಿಯ ಪ್ರಮುಖ ಟಾರ್ಗೆಟ್ ಮಾಯಪ್ಪ ಆಗಿದ್ದ. ಆದರೆ, ಜಗಳ ಬಿಡಿಸಲು ಬಂದ ಆತನ ಅಣ್ಣ ಯಲ್ಲಪ್ಪನನ್ನೂ ಆರೋಪಿ ಕೊಲೆ ಮಾಡಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದೇವೆ'' ಎಂದು ತಿಳಿಸಿದ್ದಾರೆ.
ಯುವಕರ ತಂದೆ ಹೇಳಿದ್ದೇನು?: ಕೊಲೆಯಾದ ಸಹೋದರರ ತಂದೆ ಸೋಮಪ್ಪ ಅಳಗೋಡಿ ಮಾಧ್ಯಮದವರ ಜೊತೆ ಮಾತನಾಡಿದ್ದು, ''ನಿನ್ನೆ ಸಂಜೆ ಏಳು ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ನಾನು ಕೂಡ ಸ್ಥಳದಲ್ಲೇ ಇದ್ದೆ. ಮೊದಲಿಗೆ ಸಣ್ಣ ಮಗನಿಗೆ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ದೊಡ್ಡ ಮಗನಿಗೂ ಚಾಕು ಹಾಕಿದ. ಇಬ್ಬರೂ ನನ್ನ ಬಿಟ್ಟರು. ನನ್ನ ಹೆಂಡತಿ ತೀರಿಕೊಂಡು 10 ವರ್ಷ ಆಗಿದೆ. ತಾಯಿ ಇಲ್ಲದ ಮಕ್ಕಳೆಂದು ನಾನೇ ಸಾಕಿ, ಸಲುಹುತ್ತಿದ್ದೆ. ಯಾವ ಕಾರಣಕ್ಕೆ ಹತ್ಯೆ ಮಾಡಿದ್ದಾನೋ ಗೊತ್ತಿಲ್ಲ. ಮಗ ಪ್ರೀತಿ ಮಾಡುತ್ತಿರುವ ವಿಚಾರವೂ ನನಗೆ ಗೊತ್ತಿರಲಿಲ್ಲ. ನಾಲ್ಕು ದಿನದ ಹಿಂದೆ ಹಿರಿಯರು ಕೂಡಿಕೊಂಡು ಬಗೆಹರಿಸಿದ್ದರು. ಆದರೆ, ಈಗ ನೋಡಿದರೆ ನನ್ನ ಕಣ್ಮುಂದೆ ಮಕ್ಕಳು ಹತ್ಯೆಯಾಗಿ ಹೋದರು'' ಎಂದು ದುಃಖಿತರಾದರು.