-->
1000938341
ಟೈರ್ ಸ್ಪೋಟಗೊಂಡು ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆಯೇ ಟಿಪ್ಪರ್ ಲಾರಿ ಮಗುಚಿಬಿದ್ದು ಇಂದೇ ಕುಟುಂಬದ ಐವರು ಮೃತ್ಯು

ಟೈರ್ ಸ್ಪೋಟಗೊಂಡು ರಸ್ತೆ ಬದಿಯಲ್ಲಿ ನಿಂತಿದ್ದವರ ಮೇಲೆಯೇ ಟಿಪ್ಪರ್ ಲಾರಿ ಮಗುಚಿಬಿದ್ದು ಇಂದೇ ಕುಟುಂಬದ ಐವರು ಮೃತ್ಯುಬಾಗಲಕೋಟೆ: ಮಣ್ಣು ತುಂಬಿದ್ದ ಟಿಪ್ಪರ್ ಲಾರಿ ಟೈರ್ ಸ್ಪೋಟಗೊಂಡ ಪರಿಣಾಮ ಲಾರಿ ಮಗುಚಿ ಬಿದ್ದು ರಸ್ತೆಬದಿಯಲ್ಲಿ ನಿಂತಿದ್ದ ಒಂದೇ ಕುಟುಂಬದ ಐವರು ಮೃತಪಟ್ಟಿರುವ ಘಟನೆ ಬೀಳಗಿ ತಾಲೂಕಿನ ಯತ್ನಟ್ಟಿ ಕ್ರಾಸ್ ಬಳಿ ನಡೆದಿದೆ.

ಬೀಳಗಿ ತಾಲೂಕು ಬಾದರದಿನ್ನಿ ಗ್ರಾಮದ ಯಂಕಪ್ಪ ಶಿವಪ್ಪ ತೋಳಮಟ್ಟಿ (72), ಅವರ ಪತ್ನಿ ಯಲ್ಲವ್ವ ಯಂಕಪ್ಪ ತೋಳಮಟ್ಟಿ (66), ಪುತ್ರ ಪುಂಡಲೀಕ ಯಂಕಪ್ಪ ತೋಳಮಟ್ಟಿ (40), ಪುತ್ರಿ ನಾಗವ್ವ ಅಶೋಕ ಬಮ್ಮನ್ನವರ, ನಾಗವ್ವಳ ಪತಿ ಮತ್ತು ಯಂಕಪ್ಪ ಅವರ ಅಳಿಯ ಅಶೋಕ ನಿಂಗಪ್ಪ ಬಮ್ಮನ್ನವರ (48) ಮೃತಪಟ್ಟವರು.

ಇವರ ಸಂಪೂರ್ಣ ಕುಟುಂಬ ಹೊಲದಲ್ಲಿ ಕೆಲಸ ಮುಗಿಸಿ ಮರಳಿ ತಮ್ಮೂರು ಬಾದರದಿನ್ನಿಗೆ ತೆರಳಲು ಯತ್ನಟ್ಟಿ ಕ್ರಾಸ್ ಬಳಿ ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಈ ವೇಳೆ ರಸ್ತೆಯಲ್ಲಿ ಮಣ್ಣು ತುಂಬಿಕೊಂಡು ವೇಗವಾಗಿ ಬರುತ್ತಿದ್ದ ಟಿಪ್ಪ‌ರ್ ವಾಹನದ ಟೈರ್ ಸ್ಪೋಟಗೊಂಡಿದೆ. ಪರಿಣಾಮ ಅಲ್ಲೇ ರಸ್ತೆ ಪಕ್ಕದಲ್ಲಿ ನಿಂತಿದ್ದ ಐವರ ಮೇಲೆ ಮಗುಚಿ ಬಿದ್ದಿದೆ. ಐವರೂ ಮಣ್ಣಿನಡಿ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ನಡೆದ ತಕ್ಷಣ ಟಿಪ್ಪರ್ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಬೀಳಗಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಮಣ್ಣಿನಡಿ ಸಿಲುಕಿದ್ದ ಮೃತದೇಹಗಳನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಬೀಳಗಿ ತಾಲೂಕು ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಬೀಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಬಾದರದಿನ್ನಿ, ಯತ್ನಟ್ಟಿಯ ನೂರಾರು ಮಂದಿ ಸ್ಥಳಕ್ಕೆ ಧಾವಿಸಿ ರೋಧಿಸಿದರು. ಇನ್ನೇನು 10 ನಿಮಿಷ ಕಳೆದಿದ್ದರೆ, ಅವರೆಲ್ಲ ಮನೆ ಸೇರುವವರಿದ್ದರು. ಆದರೆ, ಯಮನಂತೆ ಬಂದ ಟಿಪ್ಪ‌ರ್ ಐವರನ್ನು ಬಲಿ ಪಡೆದಿದೆ.

Ads on article

Advertise in articles 1

advertising articles 2

Advertise under the article