ಮಹಾರಾಷ್ಟ್ರ: ಬೆಕ್ಕಿನ ರಕ್ಷಣೆಗೆ ಬಾವಿಗಿಳಿದ ಐವರು ಜೀವ ಕಳೆದುಕೊಂಡ ದಾರುಣ ಘಟನೆ ಮಹಾರಾಷ್ಟ್ರದ ಅಹಮದ್‌ನಗರದ ವಾಡಿ ಗ್ರಾಮದಲ್ಲಿ ನಡೆದಿದೆ.
ವಾಡ್ತಿ ಗ್ರಾಮದ ವ್ಯಕ್ತಿಯೊಬ್ಬರು ಸಾಕಿರುವ ಮುದ್ದಾದ ಬೆಕ್ಕೊಂದು ನಾಪತ್ತೆಯಾಗಿತ್ತು. ಮನೆಯವರು ಎಲ್ಲ ಕಡೆ ಹುಡುಕಾಡಿದರೂ ಬೆಕ್ಕಿನ ಪತ್ತೆಯಾಗರಲಿಲ್ಲ. ಮಧ್ಯರಾತ್ರಿವರೆಗೂ ಮನೆಮಂದಿ ಬೆಕ್ಕು ಮನೆಗೆ ಬರಬಹುದು ಎಂದು ಕಾಯುತಿದ್ದರು. ಆದರೆ ಬೆಕ್ಕು ಬರಲೇ ಇಲ್ಲ. ಕೊನೆಗೆ ಎಲ್ಲ ಕಡೆ ಹುಡಕಾಡಿದಾಗ ಪಾಳುಬಿದ್ದ ಬಾವಿಯೊಂದರಲ್ಲಿ ಬೆಕ್ಕು ಕೂಗುವ ದನಿ ಕೇಳಿದೆ.
ಈ ಪಾಳುಬಾವಿಯನ್ನು ಜೈವಿಕ ಅನಿಲ ಪಿಟ್ ಆಗಿ ಬಳಸಲಾಗುತ್ತಿತ್ತು. ಬೆಕ್ಕಿನ ರಕ್ಷಣೆಗೆ ಒಬ್ಬೊಬ್ಬರಾಗಿ ಬಾವಿಗೆ ಇಳಿದಿದ್ದಾರೆ. ಆದರೆ ಬಾವಿಗಿಳಿದವರು ಮೇಲಕ್ಕೆ ಬಾರದೇ ಇರುವುದನ್ನು ನೋಡಿ ಮತ್ತೋರ್ವ ಬಾವಿಗಿಳಿದಿದ್ದಾನೆ. ಇದೇ ರೀತಿ ಐವರು ಬಾವಿಗೆ ಇಳಿದು ಬಾವಿಯಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಕೆಳಗೆ ಇಳಿದಿದ್ದ ಒಬ್ಬನನ್ನು ಪೊಲೀಸರು ರಕ್ಷಿಸಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ರಕ್ಷಣಾ ತಂಡ ಐದು ಮೃತದೇಹಗಳನ್ನು ಹೊರತೆಗೆದಿದೆ. ಅಹಮದ್‌ನಗರದ ನೆವಾಸಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಧನಂಜಯ್ ಜಾಧವ್ ತಿಳಿಸಿದ್ದಾರೆ.