ಮಂಗಳೂರು: ವಿಮಾನದ ಚೆಕ್‌-ಇನ್‌ ಸಿಬ್ಬಂದಿ ದುರ್ವರ್ತನೆ ಆರೋಪ - ಸಿಬ್ಬಂದಿ ವಿರುದ್ಧ ಗ್ರಾಹಕರ ಪರಿಹಾರ ಆಯೋಗಕ್ಕೆ ದೂರು

ಮಂಗಳೂರು: ವಿಮಾನದ ಚೆಕ್‌-ಇನ್‌ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆಂದು ಆರೋಪಿಸಿ ಮೂಡುಬಿದಿರೆ ನಿವಾಸಿ ಝುಬೈರ್‌ ಶೇಕ್‌ ಕರ್ನಾಟಕ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಬುಧವಾರ ದೂರು ನೀಡಿದ್ದಾರೆ.

ಝುಬೈರ್‌ ಶೇಕ್‌ ತಮ್ಮ ಪತ್ನಿ ಹಾಗೂ ಮೂವರು ಮಕ್ಕಳು ದುಬಾಯಿಗೆ ಪ್ರಯಾಣಿಸಲು ಬೆಳಗ್ಗೆ 6.35ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಬೆಳಗ್ಗೆ 7.55ಕ್ಕೆ ವಿಮಾನ ಹೊರಡುವುದಿತ್ತು. ವಿಮಾನದಲ್ಲಿ ಪ್ರಯಾಣಕ್ಕೆ ಮೊದಲು ಎಲ್ಲಾ ಪ್ರಕ್ರಿಯೆಗಳು ಮುಗಿದ ಬಳಿಕ ಚೆಕ್‌-ಇನ್‌ ಸಿಬ್ಬಂದಿ ತಮ್ಮ ಬ್ಯಾಗ್‌ಗಳನ್ನು ಹೆಚ್ಚುವರಿಯಾಗಿ ಪ್ಯಾಕ್‌ ಮಾಡುವಂತೆ ನಿರ್ದೇಶಿಸಿದ್ದಾರೆ.

ಸಿಬ್ಬಂದಿ ಹೇಳಿದನ್ನು ಅನುಸರಿಸಿ ಲಗೇಜ್‌ ಅನ್ನು ಪ್ಯಾಕ್‌ ಮಾಡಿ ಮರಳಿದಾಗ ಅವರಿಗೆ ವಿಮಾನದಲ್ಲಿ ತೆರಳಲು ಅವಕಾಶ ನಿರಾಕರಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆ ವಿಮಾನವು ಮುಂಬಯಿಗೆ ಸಂಪರ್ಕಿಸಿ, ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ದುಬಾೖಗೆ ತೆರಳಬೇಕಿತ್ತು. ಆದರೆ ತಮಗೆ ಪ್ರಯಾಣಿಸಲು ಅಸಾಧ್ಯವಾಗಿದೆ ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.