ಬಂಟ್ವಾಳ: ನಗರದ ಬಂಟ್ವಾಳ-ಮೂಡುಬಿದಿರೆ ರೋಡ್ ನ ಕುದ್ಕೋಳಿ ಸಮೀಪ ಸಂಚಾರದಲ್ಲಿದ್ದ ಕಾರೊಂದರಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ.
ಏಳಿಂಜೆಯ ಕೊಲ್ಲೆಟ್ಟು ನಿವಾಸಿ ಶರತ್ ಶೆಟ್ಟಿ ಎಂಬವರ ಕಾರಿನಲ್ಲಿ ಅಗ್ನಿ ಅವಘಡ ನಡೆದಿದೆ. ಬ್ಯಾಟರಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎನ್ನಲಾಗಿದೆ. ಬೆಂಕಿ ಅವಘಡದ ವೇಳೆ ಕಾರು ಬ್ರೇಕ್ ಹಾಕಿದರೂ ನಿಲ್ಲದಿದ್ದು, ಚಾಲಕನ ಸಮಯ ಪ್ರಜ್ಞೆಯಿಂದ ಕಾರು ನಿಂತಿದೆ. ಕಾರಿನಲ್ಲಿ ಮಗು ಸೇರಿದಂತೆ ನಾಲ್ವರು ಇದ್ದಿದ್ದು, ಯಾರಿಗೂ ಯಾವುದೇ ಹಾನಿಯಾಗಿಲ್ಲ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಅಪಾಯವನ್ನರಿತು ಕಾರಿನಲ್ಲಿದ್ದವರು ಇಳಿದ ಪರಿಣಾಮ ಯಾರಿಗೂ ಗಾಯಗಳಾಗಿಲ್ಲ. ಆದರೆ ಕಾರು ಸಂಪೂರ್ಣ ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಬಂಟ್ವಾಳ ಅಗ್ನಿಶಾಮಕ ದಳದವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವ ಕಾರ್ಯ ನಿರ್ವಹಿಸಿದ್ದಾರೆ. ಘಟನೆಯ ವೇಳೆ ಸುಮಾರು ಒಂದು ತಾಸುಗಳ ಕಾಲ ಬಂಟ್ವಾಳ- ಮೂಡುಬಿದಿರೆ ರಸ್ತೆ ಬ್ಲಾಕ್ ಆಗಿತ್ತು.