ಆಗ್ರಾ: ಗೋಧಿ ಕಟಾವು ಯಂತ್ರದಲ್ಲಿ ಸಿಲುಕಿಕೊಂಡು 14ರ ಬಾಲಕ ದಾರುಣವಾಗಿ ಮೃತಪಟ್ಟ ಘಟನೆ ಉತ್ತರಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಭೀಕರ ಘಟನೆಯಿಂದ ಬಾಲಕನ ದೇಹ ಛಿದ್ರಛಿದ್ರಗೊಂಡಿದೆ. ಈ ದೃಶ್ಯ ಕಂಡು ಸ್ಥಳೀಯರು ಶಾಕ್ ಆಗಿದ್ದು, ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
14ರ ಬಾಲಕ ತನ್ನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದು, ಗೋಧಿ ಕಟಾವು ಯಂತ್ರವನ್ನು ನಿರ್ವಹಿಸುತ್ತಿದ್ದ. ಆದರೆ, ಏಕಾಏಕಿ ಜೋರಾಗಿ ಬೀಸಿದ ಗಾಳಿಯ ರಭಸಕ್ಕೆ ಯಂತ್ರದ ಮೇಲೆ ಇಟ್ಟಿದ್ದ ಟಾರ್ಪಾಲಿನ್ ಹಾರಿ ಹೋಗಿದ್ದು, ಇದರಿಂದ ನಿಯಂತ್ರಣದ ತಪ್ಪಿದ ಬಾಲಕ ಟಾರ್ಪಾಲ್ ಸಮೇತ ಕಟಾವು ಯಂತ್ರದೊಳಗೆ ಬಿದ್ದಿದ್ದಾನೆ. ಬಾಲಕ ಕಿರುಚುವ ಧ್ವನಿ ಕೇಳುತ್ತಿದ್ದಂತೆ ಅಕ್ಕಪಕ್ಕದ ಜಮೀನಿನಲ್ಲಿದ್ದ ಸ್ಥಳೀಯರು ಸ್ಥಳಕ್ಕೆ ಅಗಮಿಸಿದರು. ಅಷ್ಟಾಗುವಾಗಲೇ ಬಾಲಕನ ದೇಹ ಛಿದ್ರಛಿದ್ರಗೊಂಡಿದೆ ಎನ್ನಲಾಗಿದೆ.
ಯಂತ್ರದ ಬಳಿ ಬಂದಾಗ ದೃಶ್ಯ ಕಂಡ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಬಳಿಕ ಬಾಲಕನನ್ನು ಬಹಳ ಕಷ್ಟಪಟ್ಟು ಯಂತ್ರದಿಂದ ಹೊರತೆಗೆಯಲಾಗಿದ್ದು, ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.