-->

ಬಂಟ್ವಾಳ: ವಂಚನೆ ಪ್ರಕರಣದ ಆರೋಪಿ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆ - ಕೊಲೆ ಶಂಕೆ ವ್ಯಕ್ತ

ಬಂಟ್ವಾಳ: ವಂಚನೆ ಪ್ರಕರಣದ ಆರೋಪಿ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹ ಆತ್ಮಹತ್ಯೆಗೈದ ರೀತಿಯಲ್ಲಿ ಪತ್ತೆ - ಕೊಲೆ ಶಂಕೆ ವ್ಯಕ್ತ

ಬಂಟ್ವಾಳ: ವಂಚನೆ ಪ್ರಕರಣದ ಆರೋಪ ಹೊತ್ತಿದ್ದ ಕಾಂಗ್ರೆಸ್ ಕಾರ್ಯಕರ್ತನೋರ್ವನ ಮೃತದೇಹ ಮನೆಯ ಪಕ್ಕದ ಗುಡ್ಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ರೀತಿ ಪತ್ತೆಯಾಗಿದೆ. 

ವಾಮದಪದವು, ತಿಮರಡ್ಡ ನಿವಾಸಿ ಪದ್ಮನಾಭ ಸೇವಂತ್ (30) ಮೃತಪಟ್ಟ ಯುವಕ.

ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಉಪಾಧ್ಯಕ್ಷರಾಗಿದ್ದ ಪದ್ಮನಾಭ ಸೇವಂತ್ ಮೇಲೆ ಇತ್ತೀಚೆಗೆ ಸರಕಾರಿ ಉದ್ಯೋಗ ತೆಗೆಸಿಕೊಡುವುದಾಗಿ ಹೇಳಿ ಯುವಕನೊಬ್ಬನಿಗೆ 1.5 ಲಕ್ಷ ರೂ. ವಂಚನೆ ಮಾಡಿರುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಇವರನ್ನು ಕರೆಸಿ ವಿಚಾರಣೆ ನಡೆಸಿದ್ದರೂ ಎನ್ನಲಾಗಿದೆ.ಕಳೆದ ಎರಡು ದಿನಗಳಿಂದ ಪದ್ಮನಾಭ ಸೇವಂತ್ ಯಾರ ಫೋನನ್ನೂ ಸ್ವೀಕರಿಸದೇ, ಯಾರಿಗೂ ಕಾಣಲು ಸಿಗದೆ ನಾಪತ್ತೆಯಾಗಿದ್ದರು. ಅವರ ಕುಟುಂಬಸ್ಥರು ಪದ್ಮನಾಭ ಸೇವಂತ್ ಗಾಗಿ ಹುಡುಕಾಟ ನಡೆಸಿದ್ದರು. ಆದರೆ ರವಿವಾರ ಬೆಳಗ್ಗೆ ಅವರ ಮೃತದೇಹ ಮನೆಯಿಂದ 200ಮೀ. ದೂರದ ಗುಡ್ಡದ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.  ಎರಡು ದಿನಗಳ ಹಿಂದೆಯೇ ಅವರು ಮೃತಪಟ್ಟಿದ್ದು, ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಮಹಜರು ನಡೆಸಿ ಮೃತದೇಹವನ್ನು ಮನೆಯವರಿಗೆ ಒಪಗಪಿಸಿದ್ದಾರೆ. ಮೇಲ್ನೋಟಕ್ಕೆ ಪದ್ಮನಾಭ ಸೇವಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕಂಡು ಬಂದರೂ ಸ್ಥಳೀಯರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಫೇಸ್ ಬುಕ್ ನಲ್ಲಿ ಸದಾ ಬ್ಯುಸಿಯಾಗಿದ್ದ ಪದ್ಮನಾಭ ಸೇವಂತ್ ಬಿಜೆಪಿ ಭ್ರಷ್ಟಾಚಾರದ ಬಗ್ಗೆ ಪೋಸ್ಟ್ ಗಳನ್ನು ಹಾಕುತ್ತಿದ್ದರು. ಆದ್ದರಿಂದ ಈ ಸಾವಿನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರೂ ಶಂಕೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ತಿಂಗಳ ಹಿಂದೆಯೇ ತನಗೆ ಕೊಲೆ ಬೆದರಿಕೆ ಇದೆಯೆಂದು ಸ್ವತಃ ಪದ್ಮನಾಭ ಸೇವಂತ್ ಅವರೇ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಮುಖೇನ ದೂರು ನೀಡಿದ್ದರು ಎನ್ನಲಾಗಿದೆ.

Ads on article

Advertise in articles 1

advertising articles 2

Advertise under the article