ಕಳವು ಆರೋಪ ಹೊರಿಸಿ ವಿವಸ್ತ್ರಗೊಳಿಸಿ ಪರಿಶೀಲನೆ : ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Sunday, March 17, 2024
ಬಾಗಲಕೋಟೆ: ಹಣ ಕಳವು ಆರೋಪ ಹೊರಿಸಿ ವಿವಸ್ತ್ರಗೊಳಿಸಿ ಪರಿಶೀಲನೆ ನಡೆಸಿದ್ದರಿಂದ ಮನನೊಂದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ಬಾಗಲಕೋಟೆ ಜಿಲ್ಲೆಯ ಕದಾಂಪುರ ಗ್ರಾಮದದಲ್ಲಿ ನಡೆದಿದೆ.
ಕದಾಂಪುರ ಗ್ರಾಮದ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟ ದುರ್ದೈವಿ. ಮಾರ್ಚ್ 16ರಂದು ಈ ಘಟನೆ ನಡೆದಿದೆ.
ಮಾರ್ಚ್ 14ರಂದು ಕದಾಂಪುರ ಪ್ರೌಢಶಾಲೆಯ ಇಬ್ಬರು ಶಿಕ್ಷಕಿಯರು ತಮ್ಮ ಬಳಿಯಿದ್ದ 2ಸಾವಿರ ರೂ. ಕಳವಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಬಳಿ ವಿಚಾರಿಸಿದ್ದಾರೆ. ಮಾರ್ಚ್ 15ರಂದು ಸಂಶಯದ ಮೇರೆಗೆ 10ನೇ ತರಗತಿಯ 4 ಹಾಗೂ 8ನೇ ತರಗತಿಯ ಓರ್ವ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ನಡೆಸಿದ್ದಾರೆ.
ಇದರಿಂದ ಮನನೊಂದ 8ನೇ ತರಗತಿ ವಿದ್ಯಾರ್ಥಿನಿ ಅವಮಾನ ತಾಳಲಾರದೆ ಶನಿವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಬಾಗಲಕೋಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.