ಅನಂತ್ ಅಂಬಾನಿ ಪ್ರಿ ವೆಡ್ಡಿಂಗ್ ಪ್ರೋಗ್ರಾಮ್ ನಲ್ಲಿ ಕುಣಿದು ಕುಪ್ಪಳಿಸಿದ ಬಾಲಿವುಡ್ ಕಲಾವಿದರನ್ನು ಟೀಕಿಸಿದ ಕಂಗನಾ
Wednesday, March 6, 2024
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ತಮ್ಮ ಖಡಕ್ ಹೇಳಿಕೆಗಳಿಗೆ ಹೆಸರುವಾಸಿ. ತಮ್ಮ ಮನಸ್ಸಿಗನಿಸಿದ್ದನ್ನು ಹೇಳಲು ಅವರು ಎಂದಿಗೂ ಹಿಂಜರಿಯುವುದಿಲ್ಲ. ಅದರಂತೆ ಸದ್ಯ ಕಂಗನಾ ಶೇರ್ ಮಾಡಿರುವ ಲೇಟೆಸ್ಟ್ ಇನ್‌ಸ್ಟಾಗ್ರಾಮ್ ಸ್ಟೋರಿ, ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಮೂರು ದಿನಗಳ ಪ್ರಿ ವೆಡ್ಡಿಂಗ್ ಸೆಲೆಬ್ರೇಶನ್‌ನಲ್ಲಿ ನಟರು ಹಾಗೂ ಕಲಾವಿದರ ಪರ್ಫಾಮೆನ್ಸ್‌ಗೆ ಪ್ರತಿಕ್ರಿಯಿಸಿದಂತಿದೆ.
ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಕುರಿತಾದ ಸುದ್ದಿಯೊಂದರ ಸ್ಟ್ರೀನ್ ಶಾಟ್ ಅನ್ನು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ನ ಸ್ಟೋರಿ ವಿಭಾಗದಲ್ಲಿ ಹಂಚಿಕೊಂಡಿದ್ದಾರೆ. ಮದುವೆಗಳಲ್ಲಿ ಪರ್ಫಾಮ್ ಮಾಡಲು ಲತಾ ಮಂಗೇಶ್ಕರ್ ನಿರಾಕರಿಸಿದ ಸುದ್ದಿ ಇದಾಗಿದೆ. ಅದರ ಸ್ಟ್ರೀನ್ ಶಾಟ್ ಅನ್ನು ಶೇರ್ ಮಾಡಿರುವ ಕಂಗನಾ, ಮದುವೆ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂಬಾನಿ ಪ್ರೋಗ್ರಾಮ್ ನಲ್ಲಿ ಕುಣಿದು ಕುಪ್ಪಳಿಸಿದವರನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.
ಲತಾ ಮಂಗೇಶ್ಕರ್ ಕುರಿತಾದ ಇಂಗ್ಲಿಷ್ ನ್ಯೂಸ್‌ನ ಹೆಡ್‌ಲೈನ್ ನಲ್ಲಿ, "ನೀವು ನನಗೆ ಐದು ಮಿಲಿಯನ್ ಡಾಲರ್ ಕೊಟ್ಟರೂ ನಾನು ಬರುವುದಿಲ್ಲ: ಲತಾ ಮಂಗೇಶ್ಕರ್ ಮದುವೆಗಳಲ್ಲಿ ಹಾಡಲು ನಿರಾಕರಿಸಿದ ಕ್ಷಣ" ಎಂಬರ್ಥದಲ್ಲಿತ್ತು. ಸುದ್ದಿಯ ಸ್ಟ್ರೀನ್‌ಶಾಟ್ ಹಂಚಿಕೊಂಡ ಕಂಗನಾ, "ನಾನು ಆರ್ಥಿಕ ಹಿನ್ನಡೆ ಅನುಭವಿಸಿದ್ದೇನೆ. ಲತಾ ಜಿ ಮತ್ತು ನಾನು ಹಿಟ್ ಸಾಂಗ್ ಹೊಂದಿರುವವರು (ಫ್ಯಾಶನ್ ಕಾ ಜಲ್ವಾ, ಘನಿ ಬಾವಿ ಹೋ ಗಯಿ, ಸಾದಿ ಗಲ್ಲಿ, ವಿಜಯ್ ಭಾವಾ ಇತ್ಯಾದಿ). ಆದರೆ ಎಂಥದ್ದೇ ಸಂದರ್ಭ ಬಂದರೂ, ನಾನೆಂದಿಗೂ ಮದುವೆ ಸಮಾರಂಭದಲ್ಲಿ ನೃತ್ಯ ಮಾಡಲಿಲ್ಲ. ಅನೇಕ ಹಿಟ್ ಐಟಂ ಹಾಡುಗಳನ್ನು ನನಗೆ ಕೊಡಲಾಯಿತು, ಹಾಗಾಗಿ ನಾನು ಆ ತಕ್ಷಣ ಪ್ರಶಸ್ತಿ ಪ್ರದಾನ ಸಮಾರಂಭಗಳಿಗೆ ಹಾಜರಾಗೋದನ್ನು ನಿಲ್ಲಿಸಿದೆ. ಖ್ಯಾತಿ ಮತ್ತು ಹಣದ ವಿಚಾರಕ್ಕೆ ಸಂಬಂಧಿಸಿದಂತೆ 'ನೋ' ಎಂದು ಹೇಳಲು ಸ್ಟಾಂಗ್ ಕ್ಯಾರೆಕ್ಟರ್ ಮತ್ತು ಘನತೆ ಬೇಕು'' ಎಂದು ಬರೆದುಕೊಂಡಿದ್ದಾರೆ.
ಗುಜರಾತ್‌ನ ಜಾಮ್‌ನಗರದಲ್ಲಿ ಅಂಬಾನಿ ಕುಟುಂಬ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಸೆಲೆಬ್ರಿಟಿಗಳು ಕುಣಿದು ಕುಪ್ಪಳಿಸಿದ ಬಳಿಕ ಕಂಗನಾ ಈ ಸ್ಟೋರಿ ಶೇರ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬಾಲಿವುಡ್ ಮಂದಿಯನ್ನು ಕಂಗನಾ ಟೀಕಿಸಿದ್ದಾರೆ ಎಂದು ನೆಟ್ಟಿಗರು ಊಹಿಸಿದ್ದಾರೆ.