ಬಂಟ್ವಾಳ: ಆಕಸ್ಮಿಕವಾಗಿ ನಡೆದ ಅಗ್ನಿ ಅವಘಡದಲ್ಲಿ ಕೂಲಿ ಕಾರ್ಮಿಕೆಯೊಬ್ಬರ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಕುಕ್ಕಿಪಾಡಿ ಗ್ರಾಪಂ ವ್ಯಾಪ್ತಿಯ ಎಲಿಯನಡುಗೋಡು ಎಂಬಲ್ಲಿ ನಡೆದಿದೆ.
ಎಲಿಯನಡುಗೋಡು ಗ್ರಾಮದ ಉಪ್ಪಿರ ನಿವಾಸಿ ಮೋನಮ್ಮ ಎಂಬವರು ತಮ್ಮಿಬ್ಬರು ಮಕ್ಕಳೊಂದಿಗೆ ಪೂಂಜಾ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯುವ ವಾರ್ಷಿಕ ಜಾತ್ರೆಗೆ ತೆರಳಿದ್ದರು. ಈ ವೇಳೆ ಮನೆ ಸಂಪೂರ್ಣ ಭಸ್ಮವಾಗಿತ್ತು. ಮನೆಯೊಳಗಿನಿಂದ ಹೊಗೆ ಬರುತ್ತಿರುವುದನ್ನು ಕಂಡ ಸ್ಥಳೀಯರು ಬೆಂಕಿಯನ್ನು ನಂದಿಸಲು ಪ್ರಯತ್ನ ಮಾಡಿದ್ದಾರೆ. ಆದರೆ ಅದಾಗಲೇ ಬೆಂಕಿ ಮನೆಯನ್ನು ಆವರಿಸಿ ಸಂಪೂರ್ಣ ಭಸ್ಮವಾಗಿತ್ತು.
ಮೋನಮ್ಮ ಅವರು ಬಡವರಾಗಿದ್ದು, ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು ತಗಡು ಶೀಟಿನ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರಿದ್ದು, ಓರ್ವಳು ಪದವಿ ವ್ಯಾಸಂಗ ಮಾಡುತ್ತಿದ್ದರೆ, ಇನ್ನೊಬ್ಬಳು
ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯಾಗಿದ್ದಾಳೆ. ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾದ ಪರಿಣಾಮ ಮನೆಯೊಳಗಿನ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿದೆ. ಪದವಿ ವಿದ್ಯಾರ್ಥಿನಿಯ ಪರೀಕ್ಷೆಯ ಪ್ರವೇಶ ಪತ್ರ ಕೂಡ ಬೆಂಕಿಗೆ ಭಸ್ಮವಾಗಿದೆ ಎಂದು ತಿಳಿದು ಬಂದಿದೆ.