ಪಟನಾ: ಎಕ್ಸಾಂನಲ್ಲಿ ಕನಿಷ್ಠ 35 ಅಂಕ ಬಾರದೆ ಫೇಲ್ ಆಗಿರುವವರು ಆತ್ಮಹತ್ಯೆ ಮಾಡಿಕೊಳ್ಳುವುದು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿನಿ ತಾನು ಫೇಲ್ ಆಗಬಾರದೆಂದು ಉತ್ತರ ಪತ್ರಿಕೆಯಲ್ಲಿಯೇ ವಿಚಿತ್ರ ಕೋರಿಕೆಯನ್ನು ಮಾಡಿದ್ದಾಳೆ. ಅವಳ ಉತ್ತರ ಪತ್ರಿಕೆಯನ್ನು ನೋಡಿದ ಪೇಪರ್ ತಿದ್ದುವವರು ಕೂಡ ಶಾಕ್ ಆಗಿದ್ದಾರೆ. ಹಾಗಾದರೆ, ವಿದ್ಯಾರ್ಥಿನಿ ಏನು ಬರೆದಿದ್ದಾಳೆ ಎಂಬುದನ್ನು ನೋಡೋಣ.
ಬಿಹಾರದಲ್ಲಿ 10ನೇ ತರಗತಿಯ ಬೋರ್ಡ್ ಪರೀಕ್ಷೆ ನಡೆದಿದೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ವೇಳೆ ವಿದ್ಯಾರ್ಥಿನಿಯೊಬ್ಬಳ ಮನವಿ ನೋಡಿ ದಂಗಾಗಿದ್ದಾರೆ. ಆಕೆ 'ತನ್ನನ್ನು ಹೇಗಾದರೂ ಮಾಡಿ ಪಾಸ್ ಮಾಡಿ ಎಂದು ಕೇಳಿಕೊಂಡಿದ್ದಾಳೆ. ಇದರ ಹಿಂದೆ ಒಂದು ಬಲವಾದ ಕಾರಣವೂ ಇದೆ. ಒಂದು ವೇಳೆ ಫೇಲ್ ಆದರೆ ತಂದೆ ಮದುವೆ ಮಾಡಿಬಿಡುತ್ತಾರೆ ಎಂಬ ಭಯಯಿದೆ ಎಂದು ಹೇಳಿದ್ದಾಳೆ.
ಸದ್ಯಕ್ಕೆ ತನಗೆ ಮದುವೆಯಾಗುವ ಬಯಕೆಯಿಲ್ಲ. ಕಡುಬಡತನದಿಂದ ಕೂಡಿದ ಕುಟುಂಬ ನಮ್ಮದು. ತಂದೆ ಕೂಲಿ ಕಾರ್ಮಿಕನಾಗಿದ್ದು, ದಿನಕ್ಕೆ 300-400 ರೂ. ದುಡಿದು ಮನೆಗೆ ತರುತ್ತಾರೆ. ಉನ್ನತ ವ್ಯಾಸಂಗ ಮಾಡಿಸಲು ಸಾಧ್ಯವಿಲ್ಲ. ಒಂದು ವೇಳೆ ಪರೀಕ್ಷೆಯಲ್ಲಿ ಫೇಲ್ ಆದರೆ, ಅದನ್ನೇ ನೆಪ ಮಾಡಿಕೊಂಡು ನನ್ನನ್ನು ಮದುವೆ ಮಾಡಿಬಿಡುತ್ತಾರೆ. ಆದರೆ, ನನಗೆ ಮದುವೆ ಬೇಡ. ನನಗೆ ಇನ್ನೂ ಹೆಚ್ಚಿಗೆ ಓದಬೇಕೆಂಬ ಆಸೆ ಇದೆ. ದಯವಿಟ್ಟು ನನ್ನನ್ನು ಪಾಸ್ ಮಾಡಬೇಡಿ ಎಂದು ಪರಿಪರಿಯಾಗಿ ಬೇಡಿಕೊಂಡಿದ್ದಾಳೆ. ಇದೀಗ ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.