ಮಣಿಪಾಲ: ಬಸ್ ನಡೆಗೆ ಸಿಲುಕಿ ಮಾಲಕ ದಾರುಣ ಸಾವು‌


ಮಣಿಪಾಲ: ಗ್ಯಾರೇಜ್ ನಲ್ಲಿ ರಿಪೇರಿಗೆ ಇಟ್ಟಿದ್ದ ಬಸ್ ನ ಪರಿಶೀಲನೆಗೆ ಬಂದಿದ್ದ ಬಸ್ ಮಾಲಕರೊಬ್ಬರು ಆಕಸ್ಮಿಕವಾಗಿ ಬಸ್ ಚಕ್ರದಡಿಗೆ ಸಿಲುಕಿ ಮೃತಪಟ್ಟ ದಾರುಣ ಘಟನೆ 80 ಬಡಗಬೆಟ್ಟುವಿನಲ್ಲಿ ನಡೆದಿದೆ.

ಮಾಂಡವಿ ಖಾಸಗಿ ಬಸ್ ಮಾಲಕ ದಯಾನಂದ ಶೆಟ್ಟಿ(65) ಮೃತಪಟ್ಟ ದುರ್ದೈವಿ.

ದಯಾನಂದ ಶೆಟ್ಟಿಯವರು ತಮ್ಮ ಬಸ್ಸನ್ನು 80 ಬಡಗಬೆಟ್ಟುವಿನ ಗ್ಯಾರೇಜ್‌ ವೊಂದರಲ್ಲಿ ರಿಪೇರಿಗೆ ಇಟ್ಟಿದ್ದರು. ಬಸ್ ರಿಪೇರಿ ಆಗಿರುವುದನ್ನು ನೋಡಲೆಂದು ಬುಧವಾರ ಗ್ಯಾರೇಜಿಗೆ ತೆರಳಿದ್ದರು. ಈ ವೇಳೆ ಚಾಲಕ ಬಸ್ಸನ್ನು ಏಕಾಏಕಿ ಚಲಾಯಿಸಿದ್ದಾರೆ. ಆಗ ಮುಂಭಾಗ ನಿಂತಿದ್ದ ದಯಾನಂದ ಶೆಟ್ಟಿ ಬಸ್ ಚಕ್ರದಡಿಗೆ ಸಿಲುಕಿದರೆ ಎನ್ನಲಾಗಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ದಯಾನಂದರನ್ನು ತಕ್ಷಣ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.