ವಿದೇಶಕ್ಕೆ ಹೋಗಲು ತಂದೆಗೇ 30ಲಕ್ಷ ರೂ. ಪಂಗನಾಮ ಹಾಕಿದ ಪುತ್ರಿ: ಕಿಡ್ನ್ಯಾಪ್ ನಾಟಕವಾಡಿ ಪೊಲೀಸ್ ಅತಿಥಿಯಾದಳು


ಜೈಪುರ: ವಿದ್ಯಾರ್ಥಿಗಳು ಪಾಕೆಟ್ ಮನಿಗಾಗಿ ಏನೇನೋ ಸಬೂಬು ಹೇಳಿ ಪೋಷಕರಿಂದ ನೂರಿನ್ನೂರು ರೂಪಾಯಿ ಪಡೆದುಕೊಂಡು ಹೋಗಿ ಮಜಾ ಮಾಡಿರುತ್ತಾರೆ. ಆದರೆ, ಇಲ್ಲೊಬ್ಬ ಯುವತಿ ತನ್ನ ಪೋಷಕರಿಂದ ಹಣ ಕೀಳಲು ಚಾಲಾಕಿತನ ಮೆರೆದು ಪೊಲೀಸ್ ಅತಿಥಿ ಆಗಿರುವ ಘಟನೆ ಬೆಳಕಿಗೆ ಬಂದಿದೆ.

ಇತ್ತೀಚಿಗೆ ರಾಜಸ್ಥಾನದ ಕೋಟಾದಲ್ಲಿ ನಡೆದಿದ್ದ ಅಪಹರಣ ಪ್ರಕರಣಕ್ಕೆ ಮಹತ್ವದ ತಿರುವು ದೊರಕಿದೆ. 30 ಲಕ್ಷ ರೂ. ಹಣಕ್ಕಾಗಿ ಈ ಯುವತಿ ತನ್ನನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ತಂದೆಗೆ ಸುಳ್ಳು ಹೇಳಿ ನಾಟಕವಾಡಿರುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ.

ಕಾವ್ಯಾ ಧಾಕಡ್ ಎಂಬ 21ರ ಯುವತಿಯು ತನ್ನ ಸ್ನೇಹಿತರ ಜೊತೆಗೆ ವಿದೇಶಕ್ಕೆ ತೆರಳಲು ತಂದೆ ಬಳಿ ಕಿಡ್ನಾಪ್ ಕತೆ ಕಟ್ಟಿದ್ದಾಳೆ. ಕೆಲ ದಿನಗಳ ಹಿಂದಷ್ಟೇ ಯುವತಿಯು ಕೈಕಾಲು ಕಟ್ಟಿದ ಫೋಟೊಗಳನ್ನು ತನ್ನ ತಂದೆಗೆ ಕಳುಹಿಸಿದ್ದಾಳೆ. ನನ್ನನ್ನು ಯಾರೋ ಅಪಹರಿಸಿದ್ದಾರೆ. ಬಿಡುಗಡೆ ಮಾಡಬೇಕು ಎಂದರೆ 30 ಲಕ್ಷ ರೂ. ಕೇಳುತ್ತಿದ್ದಾರೆ. ದಯಮಾಡಿ ದುಡ್ಡು ಕೊಟ್ಟು, ನನ್ನನ್ನು ಬಿಡಿಸಿಕೊಂಡು ಹೋಗಿ ಅಪ್ಪಾ ಎಂದು ಹೇಳಿದ್ದಾಳೆ.

ಮಗಳ ಫೋಟೋ ಹಾಗೂ ವೀಡಿಯೋ ನೋಡಿದ ತಂದೆ ಇದನ್ನು ನಂಬಿದ ಮಾರ್ಚ್ 18ರಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೂಲಂಕಷವಾಗಿ ತನಿಖೆ ನಡೆಸಿದಾಗ ಯುವತಿಯ ಕಳ್ಳಾಟ ಬಯಲಾಗಿದ್ದು, ದುಡ್ಡಿಗಾಗಿ ಮಗಳು ನಾಟಕವಾಡಿರುವುದು ತನಿಖೆಯಲ್ಲಿ ಬಯಲಾಗಿದೆ.

ನೀಟ್ ಅಭ್ಯರ್ಥಿಯಾಗಿರುವ ಯುವತಿಯನ್ನು 2023ರ ಆಗಸ್ಟ್‌ನಲ್ಲಿ ಆಕೆಯ ತಂದೆಯು ರಾಜಸ್ಥಾನದ ಕೋಟಾ ನಗರದಲ್ಲಿರುವ ಕೋಚಿಂಗ್ ಸೆಂಟರ್‌ಗೆ ಸೇರಿಸಿದ್ದಾರೆ 2023ರ ಆಗಸ್ಟ್ 3ರಂದು ಕಾವ್ಯಾ ಕೋಟಾದಲ್ಲಿರುವ ಕೋಚಿಂಗ್ ಸೆಂಟ‌ರ್ ಪ್ರವೇಶಿಸಿದ್ದಾಳೆ. ಆಗಸ್ಟ್ 5ರವರೆಗೆ ಮಾತ್ರ ಆಕೆ ಕೋಚಿಂಗ್ ಸೆಂಟರ್‌ನಲ್ಲಿದ್ದು, ಇದಾದ ಬಳಿಕ ಆಕೆ ಇಂದೋರ್‌ನಲ್ಲಿ ಗೆಳೆಯರೊಂದಿಗೆ ನೆಲೆಸಿದ್ದಾಳೆ.

ಆಕೆಯ ತಂದೆಯು ಮಗಳು ಕೋಟಾದಲ್ಲಿಯೇ ಅಧ್ಯಯನ ಮಾಡುತ್ತಿದ್ದಾಳೆ ಎಂದು ತಿಳಿದು ಪ್ರತಿ ತಿಂಗಳು ದುಡ್ಡು ಕಳುಹಿಸಿದ್ದಾರೆ. ಇನ್ನು ಕಾವ್ಯಾಳಿಗೆ ವಿದೇಶದಲ್ಲಿ ಅಧ್ಯಯನ ಮಾಡಬೇಕು ಎಂಬ ಆಸೆ ಇದ್ದು, ಇದಕ್ಕಾಗಿ ಆಕೆ ಕಿಡ್ನ್ಯಾಪ್ ಕತೆ ಕಟ್ಟಿದ್ದಾಳೆ ಎಂಬ ವಿಚಾರ ಪೊಲೀಸ್‌ ವಿಚಾರಣೆ ವೇಳೆ ಆಕೆಯೇ ಒಪ್ಪಿಕೊಂಡಿದ್ದಾಳೆ ಎಂದು ವರದಿಯಾಗಿದೆ.