ಅಯೋಧ್ಯೆ ರಾಮಮಂದಿರದ ಬಳಿಕ ಗ್ಯಾನವಾಪಿ ಮಸೀದಿ ಬಗ್ಗೆ ಮಹತ್ತರ ತೀರ್ಪು : ಮಸೀದಿ ತಳ ಮಹಡಿಯ ಮೂರ್ತಿಗಳಿಗೆ ಪೂಜೆ ಸಲ್ಲಿಕೆಗೆ ಅವಕಾಶ
Thursday, February 1, 2024
ಲಕ್ನೋ: ಕಾಶಿಯ ವಿಶ್ವನಾಥ ಮಂದಿರದ ಆವರಣದಲ್ಲಿರುವ ಗ್ಯಾನವಾಪಿ ಮಸೀದಿಯ ವ್ಯಾಜ್ಯದಲ್ಲಿ ಹಿಂದೂಗಳಿಗೆ ಮಹತ್ತರವಾದ ಯಶ ಲಭಿಸಿದೆ. ಗ್ಯಾನವಾಪಿ ಮಸೀದಿಯ ಸಂಕೀರ್ಣದಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿಯನ್ನು ಸುದೀರ್ಘ ವಿಚಾರಣೆಯ ಬಳಿಕ ವಾರಣಾಸಿ ಕೋರ್ಟ್ ಮಹತ್ವದ ತೀರ್ಪು ನೀಡಿ, ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಹೇಳಿದೆ. ಮಸೀದಿಯ ಆವರಣದಲ್ಲಿ ಏಳು ದಿನದೊಳಗೆ ಹಿಂದೂಗಳಿಗೆ ಪೂಜೆ ಸಲ್ಲಿಸಲು ಸ್ಥಳೀಯ ಜಿಲ್ಲಾಡಳಿತ ಅವಕಾಶ ಮಾಡಿಕೊಡಬೇಕು ಎಂದು ಸೂಚಿಸಿದೆ.
ವಿವಾದಿತ ಗ್ಯಾನವಾಪಿ ಮಸೀದಿಯ ನೆಲಮಹಡಿಯಲ್ಲಿರುವ ದೇವರ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಕೋರ್ಟ್ ಅವಕಾಶ ನೀಡಿದೆ. ವಾರಣಾಸಿ ಜಿಲ್ಲಾ ಕೋರ್ಟ್ ಈ ಮಹತ್ವದ ಆದೇಶ ನೀಡುತ್ತಿದ್ದಂತೆ ಹಿಂದೂಗಳ ಸಂಭ್ರಮ ಮುಗಿಲು ಮುಟ್ಟಿದೆ. ಕಾಶಿಯ ವಿಶ್ವನಾಥ ದೇಗುಲ ಟ್ರಸ್ಟ್ ಗೆ ಪೂಜೆಗೆ ಉಸ್ತುವಾರಿ ನೋಡಿಕೊಳ್ಳಲು ಕೋರ್ಟ್ ಅನುಮತಿ ನೀಡಿದೆ. ವಿವಾದಿತ ಸ್ಥಳದಲ್ಲಿನ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಕೇವಲ ಅರ್ಚಕರು ಮಾತ್ರ ತೆರಳಬೇಕು. ಸಾರ್ವಜನಿಕರ ದರ್ಶನ ಹಾಗೂ ಪೂಜೆಗೆ ಅವಕಾಶವಿಲ್ಲ ಎಂದೂ ಕೋರ್ಟ್ ಹೇಳಿದೆ.
1993ರ ಬಳಿಕ ಗ್ಯಾನವಾಪಿ ಮಸೀದಿಯ ಕೆಳಗಿನ ಮಹಡಿಯಲ್ಲಿರುವ ಹಿಂದೂ ಮೂರ್ತಿಗಳಿಗೆ ಪೂಜೆ ಮಾಡಲು ಅವಕಾಶ ನಿರಾಕರಿಸಲಾಗಿತ್ತು. ಆ ಬಳಿಕ, ಗ್ಯಾನವಾಪಿಯಲ್ಲಿ ಕೇವಲ ಮುಸ್ಲಿಮರಿಂದ ಮಾತ್ರ ಪ್ರಾರ್ಥನೆ ನಡೆಯುತ್ತಿತ್ತು. ಇತ್ತೀಚೆಗೆ ಮಸೀದಿಯ ಸರ್ವೆ ನಡೆಸಿದ್ದ ಭಾರತೀಯ ಪುರಾತತ್ವ ಇಲಾಖೆ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನು ಆಧರಿಸಿ ವಕೀಲರಾದ ಹರಿಶಂಕರ್ ಜೈನ್ ಹಾಗೂ ಶಶಿಶಂಕರ್ ಜೈನ್ ಮತ್ತೊಂದು ಅರ್ಜಿ ಸಲ್ಲಿಸಿದ್ದರು. ಹಿಂದೂ ಮಂದಿರ ಅನ್ನುವುದು ಪುರಾತತ್ವ ಇಲಾಖೆಯಲ್ಲಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಹಿಂದೂ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಕೋರಿದ್ದರು.
ಸದ್ಯ ಈ ಅರ್ಜಿಯನ್ನು ಪುರಸ್ಕರಿಸಿದ ಕೋರ್ಟ್ ಪೂಜೆಗೆ ಅವಕಾಶ ನೀಡಿದೆ. ಹಿಂದುಗಳ ಪೂಜೆಗೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಐವರು ಮಹಿಳೆಯರು ವಾರಣಾಸಿ ಕೋರ್ಟ್ ಮೆಟ್ಟಿಲೇರಿದ್ದರು. ಗ್ಯಾನವಾಪಿ ಮಸೀದಿ ವಿವಾದಕ್ಕೆ ಈ ಅರ್ಜಿ ಮರು ಜೀವ ನೀಡಿತ್ತು.