ಮಂಗಳೂರು: ಫುಡ್ ಪಾಯಿಸನ್ ನಿಂದ ಶ್ರೀನಿವಾಸ್ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ

ಮಂಗಳೂರು: ಫುಡ್ ಪಾಯಿಸನ್ ಗೊಳಗಾಗಿ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥರಾದ ಘಟನೆ ಮಂಗಳವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ನಗರದ ಹೊರವಲಯದ ವಳಚ್ಚಿಲ್ ನಲ್ಲಿರುವ ಶ್ರೀನಿವಾಸ ಇಂಜಿನಿಯರಿಂಗ್ ಕಾಲೇಜು ಹಾಸ್ಟೆಲ್ ನಲ್ಲಿ ಈ ಘಟನೆ ನಡೆದಿದೆ. ಹಾಸ್ಟೆಲ್ ನಲ್ಲಿ ರಾತ್ರಿ ಊಟಕ್ಕೆಂದು ಆಹಾರ ಸೇವಿಸಿದ ಬಳಿಕ ವಿದ್ಯಾರ್ಥಿಗಳು ಬೇಧಿ, ಹೊಟ್ಟೆ ನೋವಿನಿಂದ ಅಸ್ವಸ್ಥರಾಗಿದ್ದಾರೆ. ತಕ್ಷಣ ವಿದ್ಯಾರ್ಥಿಗಳನ್ನು ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಕೆಲವು ವಿದ್ಯಾರ್ಥಿಗಳನ್ನು ಮುಕ್ಕದಲ್ಲಿರುವ ಶ್ರೀನಿವಾಸ ಆಸ್ಪತ್ರೆಗೆ ದಾಖಲಿಸಲಾಗಿದೆ.


ಈ ಬಗ್ಗೆ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಾಧಿಕಾರಿ, ಹಾಸ್ಟೆಲ್ ನಲ್ಲಿ ಆಹಾರ ಸೇವಿಸಿರುವ 35 ವಿದ್ಯಾರ್ಥಿಗಳು ಬೇಧಿ, ಹೊಟ್ಟೆನೋವಿನಿಂದ ಅಸ್ವಸ್ಥರಾಗಿದ್ದಾರೆ. ಅಲ್ಲಿಗೆ ನಾನು ತಂಡದೊಂದಿಗೆ ಹೋಗಿ ಪರಿಶೀಲನೆ ನಡೆಸಿದ್ದೇನೆ. ಆಹಾರದ ಸ್ಯಾಂಪಲ್ ಗಳನ್ನು ಪ್ರಯೋಗಾಲಯಕ್ಕೆ‌ ಕಳುಹಿಸಲಾಗಿದೆ. ಅಸ್ವಸ್ಥರಾದ ವಿದ್ಯಾರ್ಥಿಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.