ಹೋರಿಹಬ್ಬ ವೀಕ್ಷಿಸುತ್ತಿದ್ದ ವಿದ್ಯಾರ್ಥಿ ಹೋರಿ ತಿವಿದು ಸಾವು


ಶಿವಮೊಗ್ಗ: ಹೋರಿ ಹಬ್ಬ ವೀಕ್ಷಿಸುತ್ತಿದ್ದ ವಿದ್ಯಾರ್ಥಿ ಹೋರಿ ತಿವಿದು ಮೃತಪಟ್ಟ ಘಟನೆ ಶಿಕಾರಿಪುರ ತಾಲ್ಲೂಕಿನ ಕಲ್ಮನೆ ಗ್ರಾಮದಲ್ಲಿ ಸೋಮವಾರ ನಡೆದಿದೆ.

ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಹೊಸಮಳಲಿ ಗ್ರಾಮದ ನಿವಾಸಿ ಪುನೀತ್ ಆಚಾರ್ (19) ಮೃತಪಟ್ಟ ಯುವಕ.

ಪುನೀತ್ ಆಚಾರ್ ಶಿಕಾರಿಪುರ ಪಟ್ಟಣದ ವಿದ್ಯಾರ್ಥಿ ನಿಲಯದಲ್ಲಿ ನೆಲಸಿ, ಐಟಿಐ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ. ಈತ ಕಲ್ಮನೆ ಗ್ರಾಮದಲ್ಲಿ ನಡೆಯುತ್ತಿದ್ದ ಹೋರಿಹಬ್ಬವನ್ನು ವೀಕ್ಷಿಸುತ್ತಿದ್ದರು‌. ಈ ವೇಳೆ ಹೋರಿ ತಿವಿದ ಪರಿಣಾಮ ತೀವ್ರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಮಾರ್ಗ ಮಧ್ಯೆ ಅವರು ಕೊನೆಯುಸಿರೆಳೆದಿದ್ದಾರೆಂದು ತಿಳಿದು ಬಂದಿದೆ.

ಈ ಬಗ್ಗೆ ಪುನೀತ್ ತಂದೆ ಶಿಕಾರಿಪುರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿ ಹೋರಿ ಹಬ್ಬ ಆಯೋಜಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.