ಮಂಗಳೂರು: ಸಿವಿಲ್ ಜಡ್ಜ್ ಪರೀಕ್ಷೆಯನ್ನು 25 ವರ್ಷಕ್ಕೇ ಪಾಸ್ ಮಾಡಿದ ಅನಿಲ್ ಜಾನ್ ಸಿಕ್ವೆರಾ - ಜಡ್ಜ್ ಹುದ್ದೆಗೇರಿದ ರಾಜ್ಯದ ಅತ್ಯಂತ ಕಿರಿಯ ಸಾಧಕ
Friday, February 23, 2024
ಮಂಗಳೂರು: ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ತನ್ನ 25ನೇ ವರ್ಷದಲ್ಲಿಯೇ ಪಾಸ್ ಮಾಡಿ ರಾಜ್ಯದಲ್ಲಿಯೇ ಜಡ್ಜ್ ಹುದ್ದೆಗೇರಿದ ಅತಿ ಕಿರಿಯ ಸಾಧಕ ಎಂಬ ಹೆಗ್ಗಳಿಕೆಗೆ ಬಂಟ್ವಾಳ ಬೋರಿಮಾರು ಮೂಲದ ಯುವಕ ಅನಿಲ್ ಜಾನ್ ಸಿಕ್ವೆರಾ ಪಾತ್ರರಾಗಿದ್ದಾರೆ.
ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಬಿಬಿಎ ಮತ್ತು ಎಲ್‌ಎಲ್ ಬಿ ಪೂರೈಸಿದ್ದ ಅನಿಲ್ ಜಾನ್ ಸಿಕ್ವೆರಾ ಕಾಲೇಜು ದಿನಗಳಲ್ಲಿಯೇ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು. ಬಂಟ್ವಾಳದ ಬೊರಿಮಾರಿನ ಸೈಂಟ್ ಜೋಸೆಫ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಮಾಣಿ ಕರ್ನಾಟಕ ಹೈಸ್ಕೂಲ್ ನಲ್ಲಿ ಪ್ರೌಢ ಶಿಕ್ಷಣ, ಪುತ್ತೂರು ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ಪಿಯುಸಿ ಶಿಕ್ಷಣ ಪಡೆದಿದ್ದರು.
ಕಾನೂನು ಪದವಿ ಬಳಿಕ ಮಂಗಳೂರಿನಲ್ಲಿ ಬಾರ್ ಅಸೋಸಿಯೇಶನ್ ಸದಸ್ಯರಾಗಿ ಪ್ರಾಕ್ಟಿಸ್ ಆರಂಭಿಸಿದ್ದರು. ಮಂಗಳೂರಿನ ವಕೀಲರಾದ ದೀಪಕ್ ಡಿಸೋಜ ಮತ್ತು ನವೀನ್ ಪಾಯಸ್ ರೊಂದಿಗೆ ವೃತ್ತಿ ನಿರ್ವಹಿಸುತ್ತಿದ್ದರು. ಅನಿಲ್ ಜಾನ್ ಸಿಕ್ವೆರಾ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯನ್ನು ಎರಡೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದಾರೆ.