ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಹೊಟ್ಟೆಯಲ್ಲಿತ್ತು 2ಕೆಜಿ ಕೂದಲ ಗೆಡ್ಡೆ - ಕೂದಲು ಹೊಟ್ಟೆಯೊಳಗೆ ಹೋಗಿದ್ದು ಹೇಗೆ?


ಕೋಝಿಕ್ಕೋಡ್: ಕೇರಳದ ಕೋಯಿಕ್ಕೋಡ್ ಮೆಡಿಕಲ್‌ ಕಾಲೇಜಿನ ವೈದ್ಯರು 15 ವರ್ಷದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯ ಹೊಟ್ಟೆಯಿಂದ ಬರೋಬ್ಬರಿ ಎರಡು ಕೆಜಿ ಕೂದಲ ಗೆಡ್ಡೆಯನ್ನು ಹೊರತೆಗೆದಿದ್ದಾರೆ.

ಪಾಲಕ್ಕಾಡ್‌ನ 10ನೇ ತರಗತಿಯ ವಿದ್ಯಾರ್ಥಿನಿಯನ್ನು ಫೆ. 8 ರಂದು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಸಿಟಿ ಸ್ಕ್ಯಾನ್ ಮಾಡುವಾಗ ಆಕೆಯ ಹೊಟ್ಟೆಯಲ್ಲಿ ಗಡ್ಡೆ ಇರುವುದು ಪತ್ತೆಯಾಗಿದೆ. ಬಳಿಕ ಎಂಡೋಸ್ಕೋಪಿ ನಡೆಸಿದಾಗ ಹೊಟ್ಟೆಯಲ್ಲಿ ಕೂದಲಿನ ರಾಶಿ ಪತ್ತೆಯಾಗಿದೆ.

ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಶಸ್ತ್ರಚಿಕಿತ್ಸಾ ವಿಭಾಗದ ಪ್ರೊ. ಡಾ. ವೈ. ಶಹಜಹಾನ್ ನೇತೃತ್ವದಲ್ಲಿ 2 ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ, ಕೂದಲಿನ ರಾಶಿಯನ್ನು ಹೊರಗೆ ತೆಗೆಯಲಾಗಿದೆ. ಬಾಲಕಿ ನಿಯಮಿತವಾಗಿ ತನ್ನ ಕೂದಲನ್ನು ಸೇವಿಸಿದ್ದರಿಂದ ಅಷ್ಟೊಂದು ಕೂದಲು ಹೊಟ್ಟೆಯಲ್ಲಿ ಸೇರಿತ್ತು ಎಂದು ತಿಳಿದುಬಂದಿದೆ.

ಕೂದಲು ತಿನ್ನುವ ಸ್ಥಿತಿಗೆ ಏನಂತಾರೆ?

ಅಂದಹಾಗೆ ಕೂದಲು ತಿನ್ನುವ ಸ್ಥಿತಿಯನ್ನು 'ಟ್ರೈಕೋಬೆಜೋ‌ರ್' ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲಾಗುತ್ತದೆ. ಇದು ಆತಂಕ ಮತ್ತು ಒತ್ತಡದ ಮಕ್ಕಳಲ್ಲಿ ಅಪರೂಪವಾಗಿ ಕಂಡುಬರುತ್ತದೆ. ಸೇವಿಸುವ ಕೂದಲು ಹೊಟ್ಟೆಯಲ್ಲಿರುವ ಆಹಾರದೊಂದಿಗೆ ಸಂಯೋಜನೆಗೊಂಡು ದೈತ್ಯ ಗೆಡ್ಡೆಯನ್ನು ರೂಪಿಸಬಹುದು. ಈ ರೋಗ ಲಕ್ಷಣಗಳು ಯಾವುವೆಂದರೆ, ಆಹಾರದಲ್ಲಿ ಆಸಕ್ತಿಯ ನಷ್ಟ, ರಕ್ತಹೀನತೆ, ಕುಂಠಿತ ಬೆಳವಣಿಗೆ ಮತ್ತು ದೀರ್ಘಕಾಲದ ಆಯಾಸವನ್ನು ಒಳಗೊಂಡಿರುತ್ತದೆ.