ಬಂಟ್ವಾಳ: ಗುಡ್ಡದಲ್ಲಿ ಎದ್ದ ಬೆಂಕಿ ನಂದಿಸಲು ಹೋಗಿ ವೃದ್ಧ ದಂಪತಿ ಸಜೀವ ದಹನ
Sunday, January 28, 2024
ಬಂಟ್ವಾಳ: ಇಲ್ಲಿನ ಲೊರೆಟ್ಟೊಪದವು ಬಳಿಯ ತುಂಡುಪದವು ಎಂಬಲ್ಲಿನ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಹೋಗಿ ವೃದ್ಧ ದಂಪತಿ ಸುಟ್ಟು ಕರಕಲಾದ ದಾರುಣ ಘಟನೆ ಸಂಭವಿಸಿದೆ.
ತುಂಡುಪದವು ನಿವಾಸಿ ಗಿಲ್ಬರ್ಟ್ ಕಾರ್ಲೊ (78) ಹಾಗೂ ಅವರ ಪತ್ನಿ ಕ್ರಿಸ್ಟಿನಾ ಕಾರ್ಲೊ (70) ಮೃತಪಟ್ಟ ವೃದ್ಧ ದಂಪತಿ.
ರವಿವಾರ ಮಧ್ಯಾಹ್ನ ತುಂಡುಪದವಿನ ಗುಡ್ಡದಲ್ಲಿ ಬೆಂಕಿ ವ್ಯಾಪಿಸಿತ್ತು. ಇದನ್ನು ಗಮನಿಸಿದ ಸ್ಥಳೀಯ ನಿವಾಸಿಗಳು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಈ ವೇಳೆ ಬೆಂಕಿಯಿಂದ ಸುಟ್ಟು ಕರಕಲಾಗಿರುವ ಗಿಲ್ಬರ್ಟ್ ಕಾರ್ಲೊ ದಂಪತಿಯ ಮೃತದೇಹ ಕಂಡುಬಂದಿದೆ. ಇದರಿಂದ ಗಾಬರಿಗೊಂಡ ಸ್ಥಳೀಯರು ಅಗ್ನಿಶಾಮಕ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ದೌಢಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ನಂದಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಮಹಜರು ನಡೆಸಿದ್ದಾರೆ.
ಗಿಲ್ಬರ್ಟ್ ದಂಪತಿ ಸುತ್ತಮುತ್ತಲಿದ್ದ ಗುಡ್ಡದ ಕಸಕಡ್ಡಿಗಳಿಗೆ ಬೆಂಕಿ ಹಚ್ಚಿರಬೇಕು. ಇಲ್ಲದಿದ್ದರೆ ಬಿಸಿಲಿಗೆ ಹುಲ್ಲು, ಕುರುಚಲು ಗಿಡಗಳ ಪೊದೆಗಳಿಗೆ ಬೆಂಕಿ ಹತ್ತಿ ಅದು ಇವರ ಮನೆ ಪಕ್ಕದ ಗುಡ್ಡಕ್ಕೆ ವ್ಯಾಪಿಸಿರಬೇಕು. ದಂಪತಿ ಬೆಂಕಿ ನಂದಿಸಲು ಹೋಗಿರಬಹುದು. ಈ ವೇಳೆ ವೃದ್ಧ ದಂಪತಿಗೆ ಬೆಂಕಿ ಹತ್ತಿ ಅದರಿಂದ ಹೊರಬರಲಾಗದೆ ಅಲ್ಲೇ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ವಿದೇಶದಲ್ಲಿ ಕೆಲಸದಲ್ಲಿದ್ದು ಸದ್ಯ ತವರೂರಿನಲ್ಲಿ ನಿವೃತ್ತ ಜೀವನ ಸಾಗಿಸುತ್ತಿರುವ ಗಿಲ್ಬರ್ಟ್ ಕಾರ್ಲೊ ದಂಪತಿ ಒಂದೂವರೆ ವರ್ಷಗಳ ಹಿಂದೆಯಷ್ಟೇ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ ನಡೆಸಿತ್ತು. ದಂಪತಿಗೆ ಮೂವರು ಪುತ್ರಿಯರಿದ್ದು, ಇಬ್ಬರು ವಿದೇಶದಲ್ಲಿದ್ದರೆ, ಓರ್ವಾಕೆ ಮಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.